ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ರೆಡ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ ಈ ನಿರ್ಧಾರ ಪ್ರಕಟಿಸಿರುವ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಆಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಚಾಹಲ್ ಅವರು ಇತ್ತೀಚೆಗೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಾರ್ಥಂಪ್ಟನ್ ಶೈರ್ ಪರ ಮಿಡ್ಲ್‌ಸೆಕ್ಸ್ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿದ್ದರು. ಇದೇ ಪಂದ್ಯ ಅವರ ರೆಡ್-ಬಾಲ್ ವೃತ್ತಿಜೀವನದ ಅಂತಿಮ ಪಂದ್ಯವಾಗಿದೆ.
ಚಾಹಲ್ ಒಟ್ಟು 49 ಪ್ರಥಮ ದರ್ಜೆ ಪಂದ್ಯಗಳಲ್ಲಿ 148 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಸಾಧನೆ 6/25 ಆಗಿದ್ದು, ಆರು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 2026ರ ತಮ್ಮ ಕೊನೆಯ ಕೌಂಟಿ ಋತುವಿನಲ್ಲಿ ನಾರ್ಥಂಪ್ಟನ್‌ಶೈರ್ ಪರ ಐದು ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಭಾರತ ಪರ ಚಾಹಲ್ 72 ಏಕದಿನ ಹಾಗೂ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಲಭಿಸಿರಲಿಲ್ಲ.
ಟೆಸ್ಟ್ ಕ್ಯಾಪ್ ಧರಿಸುವುದು ತಮ್ಮ ಬಹುಕಾಲದ ಕನಸಾಗಿತ್ತು ಎಂದು ನಿವೃತ್ತಿ ಘೋಷಣೆ ವೇಳೆ ಚಾಹಲ್ ಹೇಳಿದ್ದಾರೆ. ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದರೂ ತಮ್ಮ ಕ್ರಿಕೆಟ್ ವೃತ್ತಿಜೀವನ ಮುಗಿದಿಲ್ಲ ಎಂದು ಚಾಹಲ್ ಸ್ಪಷ್ಟಪಡಿಸಿದ್ದಾರೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೆ ಭಾರತ ತಂಡಕ್ಕೆ ಅವಕಾಶ ಪಡೆಯಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
