ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಅಂದಾಕ್ಷಣ ಹೆಂಗಸರಿಗೆ ಬರುವ ಭೀಕರ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಮಸ್ಯೆ ಪುರುಷರನ್ನೂ ಬಾಧಿಸುತ್ತಿದೆ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಅಮೆರಿಕದಂಥ ದೇಶಗಳಲ್ಲಿ ನೂರು ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಒಬ್ಬರು ಪುರುಷರಿದ್ದಾರೆ ಎನ್ನುತ್ತವೆ ಅಂಕಿ-ಅಂಶಗಳು. ಹೀಗಾಗಿ ಪ್ರಕರಣಗಳು ಅಪರೂಪ ಎನಿಸಿದರೂ, ಬೆಳಕಿಗೆ ಬರುತ್ತಲೇ ಇವೆ. ಭಾರತದಲ್ಲಿ ಈ ಸಮಸ್ಯೆ ಸಣ್ಣ ಪ್ರಾಯದವರನ್ನೂ ಬಾಧಿಸುತ್ತಿದ್ದು, ರೋಗ ತೀವ್ರವಾಗಿಯೂ ಇರುತ್ತದೆ ಎಂಬುದಾಗಿ ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.
ಸಾಮಾನ್ಯವಾಗಿ ಇದು ಮಹಿಳೆಯರಿಗೆ ಹೇಗೆ ಕಾಣಿಸಿಕೊಳ್ಳುತ್ತದೆ, ಅದೇ ರೀತಿ ಇರುತ್ತದೆ ಎಂದು ಹೇಳಲಾಗಿದೆ. ಮೊದಲನೆಯದಾಗಿ ಸ್ತನದ ಅಂಗಾಂಶಗಳಲ್ಲಿ ವ್ಯತ್ಯಾಸ ಕಾಣುತ್ತವೆ ಎಂದು ಹೇಳಲಾಗಿದೆ. ಎರಡನೆಯದಾಗಿ ನೋವು ಸಹಿತ ಅಥವಾ ನೋವಿಲ್ಲದಂಥ ಗಡ್ಡೆಗಳು ಕಂಡುಬರಬಹುದು, ಮೂರನೆಯದಾಗಿ ಅಸ್ವಾಭಾವಿಕವಾಗಿ ಗಾತ್ರ ಹಿಗ್ಗಬಹುದು, ನಾಲ್ಕನೆಯದಾಗಿ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದು, ಐದನೆಯದಾಗಿ ಸ್ತನದ ತೊಟ್ಟುಗಳು ಒಳ ಸರಿಯಬಹುದು, ಆರನೆಯದಾಗಿ ತೊಟ್ಟುಗಳಿಂದ ದ್ರವ ಒಸರಬಹುದು ಹಾಗೂ ತೋಳಿನ ಅಡಿಗಿನ ಸ್ವೇದ ಗ್ರಂಥಿಗಳು ಹಿಗ್ಗಬಹುದು, ಕಂಕುಳಿನಲ್ಲಿ ಗಡ್ಡೆಗಳು ಕಾಣಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ಪುರುಷರು ಸಹ ವೈದ್ಯರ ಬಳಿ ತಪಾಸಣೆಗೆ ಹೋಗುವುದು ಅನಿವಾರ್ಯವಾಗಿದೆ.
ಮಹಿಳೆಯರಲ್ಲಿ ಕಂಡಂತೆ, ಪುರುಷರಲ್ಲೂ ಇದಕ್ಕೆ ಹಲವಾರು ಕಾರಣಗಳನ್ನು ವೈದ್ಯ ವಿಜ್ಞಾನ ಪಟ್ಟಿ ಮಾಡುತ್ತದೆ. ಸ್ತನ ಕ್ಯಾನ್ಸರ್‌ನ ಸಮಸ್ಯೆ ಅನುವಂಶಿಕವಾಗಿ ಇದ್ದಲ್ಲಿ, ವಯಸ್ಸು ಹೆಚ್ಚಿದ್ದಲ್ಲಿ, ಬಿಆರ್‌ಸಿಎ೨ ನಂಥ ವಂಶವಾಹಿಯ ಬದಲಾವಣೆ ಅನುವಂಶೀಯವಾಗಿ ಬಂದಿದ್ದರೆ, ಹಾರ್ಮೋನಿನ ಅಸಮತೋಲನ, ಬೊಜ್ಜು- ಅತಿತೂಕ, ಯಕೃತ್ತಿನ ಸಮಸ್ಯೆಗಳು- ಇಂಥ ಎಲ್ಲ ಸಮಸ್ಯೆಗಳು ಪುರುಷರಲ್ಲಿ ಸ್ತನ ಕ್ಯಾನ್ಸರ್ ಬರುವುದಕ್ಕೆ ಮೂಲವಾಗಬಹುದು.
ಈ ರೋಗ ಪುರುಷರಲ್ಲಿ ಅಪರೂಪವಾದರೂ, ಅಸಹಜವಲ್ಲ. ಹಾಗಾಗಿ ಈ ಬಗ್ಗೆ ಅರಿವು ಹೆಚ್ಚಿಸುವುದು, ಜಾಗೃತಿ ಮೂಡಿಸುವುದು ಮುಖ್ಯವಾಗಿ ಆಗಬೇಕಿದೆ. ದೇಹದ ಉಳಿದೆಲ್ಲ ಅಂಗಗಳಿಗೆ ರೋಗ ಬಂದಂತೆಯೆ, ಇಲ್ಲಿಯೂ ಬರಬಹುದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಲಕ್ಷಣಗಳು ಕಂಡರೂ ಅದನ್ನು ಕಡೆಗಣನೆ ಮಾಡದೇ ವೈದ್ಯರಲ್ಲಿ ಸಲಹೆ ಕೇಳುವುದು ಸೂಕ್ತ. ಅದರಲ್ಲೂ ಆನುವಂಶಿಕವಾಗಿ ಈ ಸಮಸ್ಯೆಗಳಿದ್ದರೆ, ಇನ್ನಷ್ಟು ಜಾಗೃತರಾಗಿ ಇರುವುದು ಅಗತ್ಯ. ಈ ಬಗ್ಗೆ ಕುಟುಂಬದ ಸದಸ್ಯರಲ್ಲೂ ತಿಳುವಳಿಕೆಯಿದ್ದರೆ, ತೊಂದರೆಯನ್ನು ನಿರ್ವಹಿಸುವುದು ಕಷ್ಟವಾಗದು. ಆರಂಭಿಕ ಹಂತದಲ್ಲಿ ಪತ್ತೆಯಾಗಿ, ಬೇಗನೆ ಚಿಕಿತ್ಸೆ ದೊರೆತಷ್ಟೂ ಪ್ರಾಣ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296