ಒಂದು ವಾರದ ಹಿಂದೆ ದಕ್ಷಿಣ ಆಫ್ರಿಕಾದ ಕರಾವಳಿಯ ಜಾರ್ಜ್ ನಗರದಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದುಬಿದ್ದ ಘಟನೆಯಲ್ಲಿ, ಸಾವಿನ ಸಂಖ್ಯೆ 32ಕ್ಕೆ ಏರಿಕೆ ಆಗಿದೆ. ಅವಶೇಷಗಳಡಿ ಬದುಕುಳಿದವರನ್ನು ಹುಡುಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿವೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನೊಬ್ಬನನ್ನು ರಕ್ಷಿಸಲಾಗಿದೆ.
ಈತ ಆಹಾರ, ನೀರಿಲ್ಲದೆ ಆರು ದಿನಗಳ ಕಾಲ ಅವಶೇಷಗಳಡಿ ಸಿಲುಕಿದ್ದ. ರಕ್ಷಣಾ ಸಿಬ್ಬಂದಿ ಈ ಕಾರ್ಮಿಕನನ್ನು ಜೀವಂತವಾಗಿ ಹೊರತಂದಾಗ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ಆರು ದಿನಗಳ ಬಳಿಕ ಬದುಕುಳಿದ ವ್ಯಕ್ತಿಯ ಹೆಸರು ಗಬ್ರಿಯೇಲ್ ಗುವಾಂಬೆ (32). ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವಶೇಷಗಳಡಿ ಇನ್ನೂ ಹಲವರು ಬದುಕಿರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ತೀವ್ರಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಸೋಮವಾರ 11 ಶವಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 20 ಕಾರ್ಮಿಕರು ಕಾಣೆಯಾಗಿದ್ದಾರೆ. ಮೇ 6ರಂದು ಕಟ್ಟಡ ಕುಸಿದು ಬಿದ್ದಿದ್ದು, 600ಕ್ಕೂ ಹೆಚ್ಚು ತುರ್ತು ಸೇವೆ ಮತ್ತು ಇತರ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಘಟನೆ ನಡೆದಾಗ ಸ್ಥಳದಲ್ಲಿ 81 ಕಾರ್ಮಿಕರಿದ್ದರು. ಈ ಪೈಕಿ 29 ಜನರನ್ನು ತಕ್ಷಣವೇ ರಕ್ಷಿಸಲಾಗಿದೆ. ಇವರಲ್ಲಿ 12 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA