ತುಮಕೂರು: ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ಬಡ ಕುಟುಂಬವೊಂದು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿದ ದಾರುಣ ಘಟನೆ ನಡೆದಿದೆ. ಈ ದುರ್ಘಟನೆ ಶೋಕದ ಛಾಯೆ ಮೂಡಿಸಿದೆ.
ಬುಕ್ಕಾಪಟ್ಟಣ ಹೋಬಳಿಯ ಹುಣಸೆಕಟ್ಟೆ ಗ್ರಾಮದ ಭೋವಿ ಜನಾಂಗದ ರತ್ನಮ್ಮ, ತಮ್ಮ ಇಬ್ಬರು ಮಕ್ಕಳ ಜೊತೆ ಊರಿನಿಂದ, ಎರಡು ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಪತಿ ಸಿದ್ದಾಭೋವಿ ಸುಮಾರು 20 ವರ್ಷಗಳ ಹಿಂದೆ ಕುಟುಂಬವನ್ನು ಬಿಟ್ಟು ಎಲ್ಲೋ ತೆರಳಿದ್ದು, ಇದುವರೆಗೆ ಮರಳಿಲ್ಲ. ಈ ಕಾರಣದಿಂದ, ರತ್ನಮ್ಮ ಹೊಲದಲ್ಲಿಯೇ ಹಸು, ಕರು, ಕುರಿ, ಮೇಕೆಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು.
ಶುಕ್ರವಾರ ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ, ಸುಮಾರು ರಾತ್ರಿ ಎರಡು ಗಂಟೆ ಸುಮಾರಿಗೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ರತ್ನಮ್ಮ ಮತ್ತು ಅವರ ಮಕ್ಕಳು ಎಚ್ಚರಗೊಂಡು ಆರಿಸುವ ಪ್ರಯತ್ನ ನಡೆಸಿದರು. ಆದರೆ, ಊರಿನಿಂದ ದೂರವಾಗಿರುವ ಕಾರಣದಿಂದ, ಸ್ಥಳೀಯರು ಬರುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಎರಡು ಹಸುಗಳು, ಒಂದು ಕರು, ಎರಡು ಕುರಿ, ನಾಲ್ಕು ಮೇಕೆ, ಮನೆಯಲ್ಲಿದ್ದ ಬಟ್ಟೆಬರೆ, ಪಾತ್ರೆಗಳು, ದವಸ ಧಾನ್ಯಗಳು, ಎಲ್ಲವೂ ಸುಟ್ಟು ಹೋದವು. ಈ ದುರ್ಘಟನೆ, ಹೇಗೋ ಜೀವನ ಸಾಗಿಸುತ್ತಿದ್ದ ಕುಟುಂಬದ ಮೇಲೆ ಮತ್ತಷ್ಟು ಸಂಕಟವನ್ನು ತಂದೊಡ್ಡಿದೆ.
ಘಟನೆ ತಿಳಿದು ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ. ಸರ್ಕಾರದಿಂದ ಅನುಗ್ರಹ ಯೋಜನೆಯಡಿ ಪರಿಹಾರ ಧನ ಶೀಘ್ರದಲ್ಲಿಯೇ ವಿತರಿಸಲಾಗುವುದೆಂದು ಭರವಸೆ ನೀಡಲಾಗಿದೆ. ಹೋಬಳಿಯ ಜೆಡಿಎಸ್ ಮುಖಂಡರಾದ ಹೆಚ್.ಜೆ. ಸತ್ಯನಾರಾಯಣ, ನೊಂದ ಕುಟುಂಬಕ್ಕೆ ಧನ ಸಹಾಯ ನೀಡಿದ್ದು, ತಾತ್ಕಾಲಿಕ ವಾಸಕ್ಕಾಗಿ ಟಾರ್ ಪಾಲ್, ಅಡಿಗೆ ಸ್ಟೋವ್, ಸಿಲಿಂಡರ್, ದವಸ ಧಾನ್ಯಗಳನ್ನು ನೀಡಿ ಸಾಂತ್ವನ ಹೇಳಿದ್ದಾರೆ. ಈ ಸಹಾಯದಿಂದ ಕುಟುಂಬಕ್ಕೆ ತಾತ್ಕಾಲಿಕ ನೆಮ್ಮದಿ ದೊರಕಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4