ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಎವೈ ಮತ್ತು ಪಿಹೆಚ್ ಹೆಚ್ ಪಡಿತರಕ್ಕೆ ಪರ್ಯಾಯವಾಗಿ ಫಲಾನುಭವಿಗಳಿಗೆ ಇಂದಿರಾ ಆಹಾರ ಕಿಟ್ ಗಳನ್ನು (ಪೌಷ್ಠಿಕ ಆಹಾರದ ಕಿಟ್) ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹೆಚ್ಚುವರಿಯಾಗಿ ನೀಡಲಾಗುವ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಹೆಚ್ಚುವರಿ ಅಕ್ಕಿ ನೀಡಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ 6,426 ಕೋಟಿ ರೂ. ಅನುದಾನದಲ್ಲಿ 6119.52 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ (ಪೌಷ್ಠಿಕ ಆಹಾರ ಕಿಟ್) ಒದಗಿಸಲು ಬಜೆಟ್ ಮರುಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ.
ಇಂದಿರಾ ಕಿಟ್ ನಲ್ಲಿ 1 ಕೆ.ಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಹಾಗೂ 1 ಕೆ.ಜಿ ಉಪ್ಪು ಇರಲಿದೆ. ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ, ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಈ ಬಗ್ಗೆ ಮಾತನಾಡಿರುವ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಒಬ್ಬರು, ಇಬ್ಬರು ಮಾತ್ರ ಪಡಿತರದಾರರು ಇದ್ದರೆ ಅರ್ಧರ್ಧ ಕೆ.ಜಿ ಇರುವ ಕಿಟ್ ನೀಡಲಾಗುತ್ತದೆ. ಕುಟುಂಬದಲ್ಲಿ ಮೂರು ನಾಲ್ಕು ಮಂದಿ ಸದಸ್ಯರು ಇದ್ದರೆ ಒಂದೊಂದು ಕೆ.ಜಿಯ ಕಿಟ್ ನೀಡಲಾಗುತ್ತದೆ. ಐದಕ್ಕಿಂತ ಹೆಚ್ಚು ಮಂದಿ ಸದಸ್ಯರು ಇದ್ದರೆ ಒಂದೂವರೆ ಕೆ.ಜಿ ಇರುವ ಕಿಟ್ ವಿತರಣೆ ಮಾಡಲಾಗುತ್ತದೆ. 1,26,15,815 ಪಡಿತರ ಕಾರ್ಡ್‌ಗಳು ಇವೆ. ಇದರಿಂದ 4,48,62,192 ಫಲಾನುಭವಿಗಳಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC