ಪಾವಗಡ: “ಹೆಣ್ಣು ಮಕ್ಕಳಿಗೆ ಕಿಡಿಗೇಡಿಗಳು ತೊಂದರೆ ಕೊಟ್ಟರೆ ಅಥವಾ ಅಪಾಯದಲ್ಲಿದ್ದರೆ ಕೂಡಲೇ ನಿರ್ಭೀತಿಯಿಂದ ಸಹಾಯವಾಣಿ 112ಕ್ಕೆ ಕರೆ ಮಾಡಿ” ಎಂದು ಪಾವಗಡ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ್ ಬಾಬು ಅವರು ತಿಳಿಸಿದ್ದಾರೆ,
ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ ಇ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕಗಳು ಮತ್ತು ಪಾವಗಡ ಪೊಲೀಸ್ ಠಾಣೆಯಿಂದ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಸುರಕ್ಷಿತ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ತಮಗೆ ಬೇರೆ ಯಾರಿಂದಾದರೂ ತೊಂದರೆ ಉಂಟಾದ ಕೂಡಲೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ಹೊಯ್ಸಳ ವಾಹನ ತಾವು ಇರುವ ಸ್ಥಳಕ್ಕೆ ಬಂದು ಪರಿಶೀಲಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸುತ್ತದೆ. ವಿದ್ಯಾರ್ಥಿಗಳು ಚಾಲನಾ ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸಬಾರದು. ಎಲ್ಲಾ ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಕುರಿತು ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಮಾನವೀಯತಾ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲಿಯಾದರೂ ಅಪಘಾತವಾದ ಕೂಡಲೇ ಅವರ ನೆರವಿಗೆ ಧಾವಿಸಬೇಕು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವವನ್ನು ಉಳಿಸುವಲ್ಲಿ ತಮ್ಮದು ಪ್ರಮುಖ ಪಾತ್ರವಾಗಿರುತ್ತದೆ. ಈ ರೀತಿ ಮಾಡುವುದರಿಂದ ಸರ್ಕಾರ ಪ್ರೋತ್ಸಾಹ ಧನವನ್ನು ಸಹ ನೀಡುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಮತ್ತು ಮಾನವೀಯತೆ ಗುಣಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್. ಶ್ರೀಧರ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ವಾಹನವನ್ನು ಚಲಾಯಿಸುವಾಗ ತಮ್ಮ ಮನದಲ್ಲಿ ಎತ್ತ ತಂದೆ-ತಾಯಿಯ ಬಗ್ಗೆ ಜಾಗೃತರಾಗಿರಬೇಕು ಮಕ್ಕಳಿಗಾಗಿ ಮನೆಯಲ್ಲಿ ತಂದೆ ತಾಯಿ ಎಲ್ಲಿ ಏನಾಯ್ತು ಎಂದು ಪರಿತಪಿಸುತ್ತಾ ಇರುತ್ತಾರೆ. ಅವರಿಗಾಗಿ ತಾವು ವಾಹನವನ್ನು ಸಂಚಾರಿ ನಿಯಮಗಳಿಗೆ ಅನುಗುಣವಾಗಿ ಚಲಾಯಿಸುವುದು ಉತ್ತಮ. ಮುಂದಿನ ದಿನಗಳಲ್ಲಿ ಮಧುಗಿರಿಯ ಆರ್ ಟಿ ಓ ಅಧಿಕಾರಿಗಳ ಜೊತೆ ಸಮನ್ವಯಗೊಂಡು ಚಾಲನಾ ಪರವಾನಗಿ ಮಾಡಿಸುವ ಶಿಬಿರವನ್ನು ಏರ್ಪಡಿಸಲು ಕ್ರಮ ವಹಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ಹಾಲುರಯ್ಯ, ಎನ್ಎಸ್ಎಸ್ ಅಧಿಕಾರಿ ಕೆ.ಬಿ. ರಾಘವೇಂದ್ರ, ಪ್ರಾಧ್ಯಾಪಕರಾದ ಪ್ರಸನ್ನ ಕುಮಾರ್, ಪೊಲೀಸ್ ಠಾಣೆಯ ಸಿಬ್ಬಂದಿ ವೆಂಕಟೇಶ್ ನಾಯ್ಕ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


