ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇತ್ತೀಚೆಗೆ ದೇಶದ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಸದಸ್ಯರಿಗೆ- ‘ನಿಮ್ಮ ಹೆಂಡತಿಯರಲ್ಲಿರುವ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ’ ಎಂದು ಕರೆ ನೀಡಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ.
ವಿರೋಧ ಪಕ್ಷವು ಭಾರತೀಯ ಉತ್ಪನ್ನಗಳ ವಿರುದ್ಧ ಅಭಿಯಾನವನ್ನು ನಡೆಸುತ್ತಿರುವುದರ ಬಗ್ಗೆ ಸಿಡಿಮಿಡಿಗೊಂಡ ಹಸೀನಾ, “BNP ನಾಯಕರು ನಿಜವಾಗಿಯೂ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ಅವರು ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನು ಸುಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಹೊಸದಿಲ್ಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಹಸೀನಾ, ತಮ್ಮ ಭಾಷಣದಲ್ಲಿ ವಿರೋಧ ಪಕ್ಷದವರಿಗೆ ಸಾಕಷ್ಟು ಪ್ರಶ್ನೆಗಳನ್ನು ಹಾಕಿ- ‘ನೀವು ಭಾರತೀಯ ಮಸಾಲೆಗಳಿಲ್ಲದ ಆಹಾರ ತಿನ್ನಬಹುದೇ? ಬಹಿಷ್ಕಾರ ಪ್ರಚಾರಕರ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಅವರು ತಮ್ಮ ಹೆಂಡತಿಯರಿಂದ ಸೀರೆಗಳನ್ನು ತೆಗೆದುಕೊಂಡು ಅವುಗಳನ್ನು ಏಕೆ ಸುಡುವುದಿಲ್ಲ? ಭಾರತದ ಉತ್ಪನ್ನಗಳನ್ನು ವಿರೋಧಿಸುವವರು ನಿಜವಾಗಿಯೂ ಅವರ ಜೀವನದಲ್ಲಿ ಬಹಿಷ್ಕರಿಸಿದ್ದಾರೆಯೇ ಎಂದು ತಿಳಿಯಲು ನಾನು ಬಯಸುತ್ತೇನೆ” ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಬಾಂಗ್ಲಾದಲ್ಲಿ ಒಬ್ಬ ದೇಶಭ್ರಷ್ಟ ಬ್ಲಾಗರ್ ಎಕ್ಸ್ ನಲ್ಲಿ ಹಾಕಿದ ಪೋಸ್ಟರ್ ‘ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದಿತ್ತು. ಅಂದಿನಿಂದ, ಈ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಲಾರಂಭಿಸಿದೆ. ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿ ಭಾರತದ ಆಪಾದಿತ ಹಸ್ತಕ್ಷೇಪವನ್ನು ವಿರೋಧಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಯಿತು ಎನ್ನಲಾಗಿದೆ. ಬಾಂಗ್ಲಾದೇಶದ ಪ್ರಸ್ತುತ ಪ್ರಧಾನಿ ಹಸೀನಾ ಮೂಲಕ ನವದೆಹಲಿ ಮತ್ತು ಢಾಕಾ ನಡುವಿನ ಸಂಬಂಧವು ಅಭಿವೃದ್ಧಿಗೊಂಡಿದೆ. ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತವು ಬಹಿರಂಗವಾಗಿ ಹಸ್ತಕ್ಷೇಪ ಮಾಡಿದೆ ಮತ್ತು ಪ್ರಭಾವ ಬೀರಿದೆ. ಭಾರತ ಸರ್ಕಾರದ ತಪ್ಪು ನೀತಿಗಳಿಂದ ಬಾಂಗ್ಲಾದೇಶವು ರಾಜಕೀಯವಾಗಿ ಹೆಚ್ಚು ನಷ್ಟವನ್ನು ಅನುಭವಿಸಿದೆ’ ಎಂದು ಅಲ್ಲಿನ ವಿರೋಧ ಪಕ್ಷ BNP ವಾದಿಸುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296