ತಮಿಳುನಾಡಿಗೆ 18 ದಿನಗಳ ಕಾಲ ನಿತ್ಯ 3000 ಕ್ಯುಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ಕಾವೇರಿ ನೀರುನಿರ್ವಹಣಾ ಪ್ರಾಧಿಕಾರ ಇಂದು ಸಭೆ ನಡೆಸಲಿದೆ.
ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದು, ತಮ್ಮ ತಮ್ಮ ಅಹವಾಲು ಮಂಡನೆ ಮಾಡಲಿದ್ದಾರೆ. ಏತನ್ಮಧ್ಯೆ, ಕಾವೇರಿ ವಿಚಾರವಾಗಿ ಕಾನೂನು ಹೋರಾಟ ತೀವ್ರಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಬೆಳಿಗ್ಗೆ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆಯಲ್ಲಿ ರಾಜ್ಯವು ವಾಸ್ತವಿಕ ಸ್ಥಿತಿಯನ್ನು ಪ್ರಸ್ತುತಪಡಿಸಲಿದೆ. ಆದಾಗ್ಯೂ ಸಿಡಬ್ಲ್ಯೂಎಂಎ ಏನನ್ನು ಶಿಫಾರಸು ಮಾಡುತ್ತಿದೆ ಎಂಬುದನ್ನು ಕಾದು ನೋಡೋಣ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕಾವೇರಿ ವಿವಾದದ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಭೆ ಕರೆಯಲಿದ್ದು, ಸಭೆಯಲ್ಲಿ ಕೃಷಿ ಮತ್ತು ನೀರಾವರಿ ತಜ್ಞರು ಭಾಗವಹಿಸಲಿದ್ದಾರೆಂದು ತಿಳಿಸಿದರು.


