ಔರಾದ: ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ ಅವರು ಗುರುವಾರ ಪಟ್ಟಣದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಸಮಸ್ಯೆಯ ಮಾಹಿತಿ ಪಡೆದುಕೊಂಡರು.1ನೇ ತರಗತಿಯಿಂದ ಪಿಯುಸಿವರೆಗಿನ ಈ ಶಾಲಾ ಪರಿಸರ ನೋಡಿ ಅಚ್ಚರಿಪಟ್ಟರು. ಸ್ವತಃ ಕೆಸರಿನಲ್ಲಿ ಓಡಾಡಿ ಮಕ್ಕಳು ಹೇಗೆ ಇಲ್ಲಿ ಬಂದು ಹೋಗುತ್ತಾರೆ? ಕನಿಷ್ಠ ಸ್ವಚ್ಛತೆ ಮಾಡಲು ಬರುವುದಿಲ್ಲವೇ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಶಾಲಾ ಆವರಣದಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ, ಅವರಿಗೆ ಬಂದು ಹೋಗಲು ರಸ್ತೆ ವ್ಯವಸ್ಥೆ ಏಕೆ ಆಗಿಲ್ಲ? ಬರೀ ಕಟ್ಟಡ ಕಟ್ಟಿದರೆ ಏನು ಪ್ರಯೋಜನ? ಎಂದು ಅಸಮಾಧಾನ ಹೊರ ಹಾಕಿದರು. ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯ ಇಲ್ಲದಿರುವುದು ಕಂಡು ಈ ಬಗ್ಗೆ ಕೆಕೆಆರ್ ಡಿಬಿಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.
ಶೌಚಾಲಯ ಸೇರಿದಂತೆ ಮಕ್ಕಳಿಗೆ ಮೂಲಕ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ. ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ ಅವರಿಗೆ ಸೂಚಿಸಿದರು. ತಾಪಂ ಇಒ ಕಿರಣ ಪಾಟೀಲ, ಪ.ಪಂ. ಮುಖ್ಯಾಧಿಕಾರಿ ಸ್ವಾಮಿದಾಸ ಅಧಿಕಾರಿಗಳು ಇದ್ದರು.
10ನೇ ತರಗತಿಗೆ ಭೇಟಿ ನೀಡಿ ಕಲಿಕೆ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಹೊಸದಾಗಿ ಆರಂಭವಾದ ಎಲ್ ಕೆಜಿ ಇಂಗ್ಲಿಷ್ ಮಾಧ್ಯಮ ಶಾಲೆಗೂ ಭೇಟಿ ನೀಡಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC