ಕೊರಟಗೆರೆ: ಮಿನಿ ಲಾಲ್ ಬಾಗ್ ಗೆ ವನಬೇಟಿ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆ 35 ಮಕ್ಕಳನ್ನು ಕುರಿಗಳಂತೆ ಟಾಟಾ ಎಸ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದು, ಈ ವೇಳೆ ವಾಹನ ಪಲ್ಟಿಯಾದ ಪರಿಣಾಮ 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಮತ್ತು ಮಾವತ್ತೂರು ಮುಖ್ಯರಸ್ತೆಯ ಗೌಡನಕುಂಟೆ ಬಳಿ ನಡೆದಿದೆ.
ಚಿಂಪುಗಾನಹಳ್ಳಿ ಸರಕಾರಿ ಪ್ರಾಥಮಿಕ ಪಾಠಶಾಲೆಯಿಂದ ದೊಡ್ಡಸಾಗ್ಗೆರೆ ಬಳಿಯ ಮಿನಿ ಲಾಲ್ ಬಾಗ್ ವೀಕ್ಷಣೆಗೆ ಶಾಲಾ ಆಡಳಿತ ಮಕ್ಕಳನ್ನು ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ವಾಹನ ಮಗುಚಿ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಮಕ್ಕಳು ರಸ್ತೆಗೆಸೆಯಲ್ಪಟ್ಟಿದ್ದು, ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡು ವಿದ್ಯಾರ್ಥಿಗಳು ನರಳಾಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕೋಳಾಲ ಪಿಎಸೈ ಯೋಗೀಶ್ ಮಕ್ಕಳನ್ನು ತಾವೇ ಎತ್ತಿ ತಮ್ಮ ಕಾರಿನಲ್ಲೇ ದೊಡ್ಡ ಸಾಗ್ಗೆರೆ ಹಾಗೂ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯಲ್ಲಿ ಶಿಕ್ಷಣ ಇಲಾಖೆ ಬಿಇಓ ಮತ್ತು ಚಿಂಪುಗಾನಹಳ್ಳಿ ಶಾಲೆಯ ಮುಖ್ಯಶಿಕ್ಷಕರ ದಿವ್ಯ ನಿರ್ಲಕ್ಷ ಕಂಡು ಬಂದಿದೆ. ಭದ್ರತೆಯೇ ಇಲ್ಲದ ಟಾಟಾ ಎಸಿ ವಾಹನದಲ್ಲಿ ಸರಕಾರಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗಲು ಬಿಇಓ ಅನುಮತಿ ನೀಡಿದ್ದಾದರೂ ಏಕೆ ಎಂಬುದೇ ಪ್ರಶ್ನೆ ಕೇಳಿ ಬಂದಿದೆ.
ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗೆ ನೆರವು ಮಾಡಿದ್ದಾರೆ.
ಕ್ರಮಕ್ಕೆ ಒತ್ತಾಯ:

ಘಟನೆ ಸಂಬಂಧ ನಮ್ಮತುಮಕೂರು ಜೊತೆಗೆ ಮಾತನಾಡಿದ ಕಾಳಜಿ ಫೌಂಡೇಶನ್ ತುಮಕೂರು ಇದರ ಕಾನೂನು ಸಲಹೆಗಾರರಾದ ಶಿವಕುಮಾರ್ ಮೇಷ್ಟ್ರು ಮನೆ , ಲಗೇಜ್ ಕ್ಯಾರಿಯರ್ ವಾಹನದಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿಸಿಕೊಂಡು ಹೋಗಿರುವ ಈ ಘಟನೆಯನ್ನು ನೋಡಿದ್ರೆ ನಾಚಿಕೆಯಾಗಬೇಕು, ಶಿಕ್ಷಣ ಇಲಾಖೆ ಆಯುಕ್ತರ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ವಾಹನದಲ್ಲೇ ಇಷ್ಟೇ ಮಿತಿಯಲ್ಲಿ ಮಕ್ಕಳನ್ನು ಕರೆದೊಯ್ಯಬೇಕು ಎನ್ನುವ ನಿಯಮವಿದೆ. ಈ ಎಲ್ಲ ಆದೇಶಗಳನ್ನು ಉಲ್ಲಂಘಿಸಿ, ಮಕ್ಕಳನ್ನು ಕರೆದೊಯ್ದು ಅವರ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಮುಖ್ಯಶಿಕ್ಷಕರು ಹಾಗೂ ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡಿದ ಬಿಇಒ, ಇವರಿಬ್ಬರ ವಿರುದ್ಧವೂ ಉಪ ನಿರ್ದೇಶಕರು ದೂರು ದಾಖಲಿಸಬೇಕು. ವಾಹನ ಮಾಲಿಕರು, ಡ್ರೈವರ್ ವಿರುದ್ಧವೂ ಕ್ರಮಕೈಗೊಳ್ಳಬೇಕು. ಬಿಇಒ ಮತ್ತು ಮುಖ್ಯ ಶಿಕ್ಷಕರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx