ನವದೆಹಲಿ: ಅಶೋಕ್ ವಿಹಾರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಘರ್ಷಣೆ ನಡೆದಿದೆ. ಮೃತರನ್ನು ರಘು ಮತ್ತು ಭೂರಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಇವರಿಬ್ಬರು ತಮ್ಮ ಸಹಚರರೊಂದಿಗೆ ಅಶೋಕ್ ವಿಹಾರದಲ್ಲಿರುವ ರವಿಕಾಂತ್ ಅಲಿಯಾಸ್ ಡಬ್ಲು ಅವರನ್ನು ಭೇಟಿ ಮಾಡಲು ಬಂದಿದ್ದರು.
ರಘು ಡಬ್ಲುವನ್ನು ಡಬ್ಲು ಭಾಯ್ ಎಂದು ಕರೆಯಲು ನಿರಾಕರಿಸಿದಾಗ ಜಗಳ ಆರಂಭವಾಗಿದೆ. ಬಳಿಕ ಡಬ್ಲು ಸಹಚರರು ರಘು ಮೇಲೆ ಗುಂಡು ಹಾರಿಸಿ ಸ್ಥಳದಲ್ಲಿಯೇ ಹತ್ಯೆ ಮಾಡಿದ್ದಾರೆ. ಅಲ್ಲದೇ ರಾಘು ಸಹಚರ ಭುರಾನನ್ನು ಕೂಡ ಕೊಲೆಗೈದಿದ್ದಾರೆ. ಇನ್ನು ಡಬ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


