ತುಮಕೂರು: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹೇಮಾವತಿ ನದಿ ನೀರು ಹರಿಸೋಕೆ ಸಂಬಂಧಪಟ್ಟಂತೆ ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು. ಕುಣಿಗಲ್ ಶಾಸಕ ಡಾ.ರಂಗನಾಥ್ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ನಡುವೆ ಜಟಾಪಟಿ ನಡೆಯಿತು.
ಎಕ್ಸ್ ಪ್ರೆಸ್ ಕೆನಾಲ್ ನಿರ್ಮಾಣ ಮಾಡುವ ಸಂಬಂಧಪಟ್ಟಂತೆ ಕುಣಿಗಲ್ ಶಾಸಕ ಹೇಮಾವತಿ ನೀರಿಗೆ ಎಕ್ಸ್ ಪ್ರೆಸ್ ಕೆನಾಲ್ ಮಾಡಬೇಕೆಂದು ಪಟ್ಟು ಹಿಡಿದು ಕುಳಿತರು. ಕುಣಿಗಲ್ ತಾಲ್ಲೂಕಿಗೆ ಪೈಪ್ ಲೈನ್ ಮೂಲಕ ನೀರು ಹರಿಸಿ ಎಂದರು. ಡಾ.ರಂಗನಾಥ್ ಬೇಡಿಕೆಗೆ ಬಿಜೆಪಿ ಶಾಸಕ ಸುರೇಶ್ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದರು.ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದರು.
ನಮ್ಮ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ನೀವು ಯಾಕೆ ವಿರೋಧ ಮಾಡ್ತೀರಾ ಎಂದು ಶಾಸಕ ಸುರೇಶ್ ಗೌಡಗೆ ಶಾಸಕ ಡಾ. ರಂಗನಾಥ್ ಪ್ರಶ್ನೆ ಮಾಡಿದರು.
ಮಧ್ಯ ಪ್ರವೇಶಿಸಿದ ಇಬ್ಬರನ್ನು ಸಮಾಧಾನ ಪಡಿಸಿದ ಸಚಿವ ಕೆ.ಎನ್ ರಾಜಣ್ಣ ವಾತಾವರಣವನ್ನು ತಿಳಿಗೊಳಿಸಿದರು.