ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಹಾಗೂ ದ್ವಿತೀಯ ರ್ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.
ಮಂಗಳವಾರ ತಮ್ಮ ಸರಕಾರಿ ನಿವಾಸ ಕಾವೇರಿಗೆ ಇಬ್ಬರೂ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಸನ್ಮಾನಿಸಿದ ಮುಖ್ಯಮಂತ್ರಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು. ಅಲ್ಲದೆ, ವಿದ್ಯಾರ್ಥಿಗಳ ಪೋಷಕರನ್ನು ಅಭಿನಂದಿಸಿದರು.
ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್‍ಗೆ 3 ಲಕ್ಷ ರೂ.ಗಳ ನೆರವನ್ನು ಘೋಷಿಸಿದ ಮುಖ್ಯಮಂತ್ರಿ, ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕಲ್ಪನೆ. 1994ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಶಾಲೆಗಳಿಗೆ ಚಾಲನೆ ನೀಡಲಾಯಿತು ಎಂದು ಸಿದ್ದರಾಮಯ್ಯ ಹೇಳಿದರು. ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಷಕರು ಸರಕಾರದ ನೆರವಿಗೆ ಧನ್ಯತೆ ಅರ್ಪಿಸಿದರು.
ನಿಮ್ಮ ಸಾಧನೆಯೆ ನನಗೆ ಪ್ರೇರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ವಿದ್ಯಾರ್ಥಿನಿ ಅಂಕಿತಾ, ‘ಸಾರ್ ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೊತ್ಸಾಹ ನೀಡಿದವು’ ಎಂದು ತಿಳಿಸಿದರು.
ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ಅಂಕಿತಾ ವ್ಯಕ್ತಪಡಿಸಿದರು. ಪಿಯುಸಿ ದಾಖಲಾತಿ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA