ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ. ರೇವಣ್ಣರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ಅಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಾಸಕ ಹೆಚ್.ಡಿ. ರೇವಣ್ಣ ಮತ್ತು ಈತನ ಮಗ ಸಂಸದ ಪ್ರಜ್ವಲ್ ರೇವಣ್ಣ ಇವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಮಹಿಳೆಯರ ಬೆತ್ತಲೆ ವೀಡಿಯೋ ಚಿತ್ರೀಕರಿಸಿರುವ ಪ್ರಕರಣ ಹಾಗೂ ಮಹಿಳೆಯೋರ್ವರನ್ನು ಅಪಹರಿಸಿ ಬಚ್ಚಿಟ್ಟ ಪ್ರಕರಣ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಚುನಾವಣೆ ಪೂರ್ವದಲ್ಲಿ ಸಂಸದ ಪ್ರಜ್ವಲ್ ರೇವಣ್ಣನ ಕಾಮದ ಕರ್ಮಕಾಂಡ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಾಗ, ರಾಜ್ಯ ಗುಪ್ತಚರ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರದ ಗಮನಕ್ಕೆ ತರಬೇಕಾದ ಆದ್ಯ ಕರ್ತವ್ಯವಾಗಿತ್ತು. ಆದರೆ ಹಾಸನದ ಮಹಾಪ್ರಭುಗಳ ಮುಲಾಜಿಗೆ ಹೆದರಿ ಅಲ್ಲಿನ ಗುಪ್ತಚರ ಇಲಾಖೆಯು ತುಟಿ ಬಿಚ್ಚದಿರುವುದನ್ನು ಮನವಿಯಲ್ಲಿ ಖಂಡಿಸಿದ್ದಾರೆ.
ಹಾಸನ ಜಿಲ್ಲೆಯ ಮತ್ತು ಇತರೆಡೆ ಮಹಿಳೆಯರು ಕೆಲಸಕ್ಕಾಗಿ ಮತ್ತು ಯಾವುದೋ ಸಹಾಯಕ್ಕಾಗಿ ಕೇಳಿಕೊಂಡು ಹೋದ ಮಹಿಳೆಯರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು, ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಕೆ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಸುಮಾರು ೨೯೦೦ಕ್ಕೂ ಹೆಚ್ಚು ವೀಡಿಯೋಗಳು ಸದ್ದು ಮಾಡುತ್ತಿವೆ. ಇವುಗಳ ಆಧಾರದ ಮೇಲೆ ಕನಿ? ೩೦೦ ಪ್ರಕರಣವನ್ನಾದರೂ ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ಕಾನೂನಿನ ಸಲಹೆ ನೀಡಿ ಮಾನಸಿಕ ಧೈರ್ಯ ತುಂಬಿ ಜೊತೆಗೆ ರಕ್ಷಣೆ ನೀಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದೆ.
ಭೇಟಿ ಬಚಾವೋ, ಭೇಟಿ ಪಡಾವೋ ಎಂದು ಬೊಬ್ಬೆ ಹೊಡೆಯುವ ಪ್ರಧಾನಿ ನರೇಂದ್ರ ಮೋದಿಯವರು ಈಗ ಮೌನವಾಗಿರುವುದು ಏಕೆ? ಮೋದಿಯ ಅಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ಈ ವಿಚಾರವಾಗಿ ಚಕಾರವೆತ್ತುತ್ತಿಲ್ಲ ಯಾಕೆ? ಇನ್ನಾದರೂ ಹಾಸನ ಜಿಲ್ಲೆಯ ಜನರು ಮತ್ತು ರಾಜ್ಯದ ಜನತೆ ಎಚ್ಚೆತ್ತುಕೊಂಡು ಬೀದಿಗಿಳಿದು ಹೋರಾಡುವ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವುದರ ಜೊತೆಗೆ ಆರೋಪಿತರಿಗೆ ಕಠಿಣ ಶಿಕ್ಷೆ ಕೊಡಿಸಲು ಮುಂದಾಗಬೇಕೆಂದು ಒಕ್ಕೂಟ ಕರೆ ನೀಡಿದೆ.
ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ ವಸಂತ್ ಕುಮಾರ್, ಉಮೇಶ್ ಕುಮಾರ್, ಪೂರ್ಣೇಶ್, ಹುಣಸೆ ಮಕ್ಕಿ ಲಕ್ಷ್ಮಣ, ಮರ್ಲೆ ಅಣ್ಣಯ್ಯ, ಮಂಜು ಕೂದುವಳ್ಳಿ, ಜಗದೀಶ್ ಕೋಟೆ, ಚಂದ್ರು ಅಂಗಡಿ, ಹೊನ್ನೇಶ್, ಶ್ರೀನಿವಾಸ್ ದಂಟರಮಕ್ಕಿ ಮತ್ತಿತರರು ವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296