ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ವಿಮಾನಯಾನ ಇಂಧನ (ATF) ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಿಸಿ ಹೆಚ್ಚಿಸಿವೆ.
ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪೂರೈಸುವ ಎಟಿಎಫ್ (Aviation Turbine Fuel) ದರವನ್ನು ಪ್ರತಿ ಲೀಟರ್‌ಗೆ 121 ರೂ.ನಿಂದ 137 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಒಂದೇ ಬಾರಿಗೆ ಪ್ರತಿ ಲೀಟರ್‌ಗೆ ಸುಮಾರು 16 ರೂಪಾಯಿಗಳಷ್ಟು ಭರ್ಜರಿ ಏರಿಕೆಯಾಗಿದೆ. ಕಳೆದೆರಡು ತಿಂಗಳಿಂದಲೂ ಎಟಿಎಫ್ ದರ ಏರಿಕೆಯಾಗುತ್ತಿದ್ದು, ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಇಂಧನದ ಪಾಲು ಶೇ 40ರಷ್ಟಿರುವುದರಿಂದ ಇದು ಏರ್‌ಲೈನ್ಸ್ ಕಂಪನಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ.
ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ: 19 ಕೆ.ಜಿ.ಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಒಂದರ ಬೆಲೆಯನ್ನು 62.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಜಾಗತಿಕ ಇಂಧನ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಬೆಲೆ ಪರಿಣಾಮದಿಂದಾಗಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ.
ಗೃಹ ಬಳಕೆಯ ಸಿಲಿಂಡರ್ ಗೆ ಬಿಗ್ ರಿಲೀಫ್:
ಸಾಮಾನ್ಯ ಜನರಿಗೆ ಕೊಂಚ ನೆಮ್ಮದಿಯ ಸಂಗತಿಯೆಂದರೆ, ಗೃಹ ಬಳಕೆಯ 14.2 ಕೆ.ಜಿ. ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಪ್ರತಿ ಸಿಲಿಂಡರ್‌ಗೆ 942 ರೂಪಾಯಿಯಲ್ಲೇ ಮುಂದುವರಿದಿದೆ.
ಮೇ ತಿಂಗಳಲ್ಲಿ ಬೆಲೆ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಈಬಾರಿಯೂ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಅಂತಾರಾಷ್ಟ್ರೀಯ ಮಾನದಂಡದ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರದ ಏರಿಳಿತಗಳನ್ನು ಆಧರಿಸಿ ಎಟಿಎಫ್ ಮತ್ತು ಎಲ್ ಪಿಜಿ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ವ್ಯಾಟ್ ನಂತಹ (VAT) ಸ್ಥಳೀಯ ತೆರಿಗೆಗಳ ಕಾರಣದಿಂದಾಗಿ ಈ ಬೆಲೆಗಳು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿರಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
