ತುಮಕೂರು: ಸಿರಾ ತಾಲ್ಲೂಕು ಹೊಯಿಲ್ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ವಿದ್ಯುತ್ ಅವಘಡದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ ಬಗ್ಗೆ ನಮ್ಮತುಮಕೂರು ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದಾರೆ.
ಇಲ್ಲಿ ತೀರಾ ಅವೈಜ್ಙಾನಿಕವಾಗಿ ಟ್ರಾನ್ಸ್ ಫರ್ಮರ್ ಅಳವಡಿಸಿದ್ದು, ಬೆಸ್ಕಾಂನ ತಳಮಟ್ಟದ ಅಧಿಕಾರಿಗಳ ನಿರ್ಲಕ್ಷ ಹಾಗೂ ಮೇಲಿನ ಅಧಿಕಾರಿಗಳ ಬೇಜಾವ್ದಾರಿತನದಿಂದ ಒಂದು ಮಗುವಿನ ಜೀವ ಬಲಿಯಾಗಿದೆ. ಗ್ರಾಮಸ್ಥರು ಹಲವು ಬಾರಿ ಈ ಬಗ್ಗೆ SO / AEE ಗಮನಕ್ಕೆ ತಂದರೂ ಈ ಬಗ್ಗೆ ಗಮನಹರಿಸಿಲ್ಲ ಎನ್ನುವುದು ತಿಳಿದು ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಈ ರೀತಿ ನಾಲ್ಕು ಮಕ್ಕಳು ಬಲಿಯಾಗಿದ್ದಾರೆ.
ಆಯೋಗ ಈಗಾಗಲೇ ರಾಜ್ಯದ್ಯಂತ ಇಂತಹ ಅಪಾಯಕಾರಿ ವಿದ್ಯುತ್ ತಂತಿ ತೆರವುಗೊಳಿಸಲು ಸೂಚಿಸಿದೆ. ಕೆಲಸ ಇನ್ನು ಕ್ಷಿಪ್ರವಾಗಿ ಆಗಬೇಕು. ಇಲ್ಲವಾದರೆ ಅಮಾಯಕ ಮಕ್ಕಳ ಮತ್ತಷ್ಟು ಬಲಿಯಾಗಲಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸದರಿ ವ್ಯಾಪ್ತಿಯ SO/AEE ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮಕೈಗೊಂಡು ಆಯೋಗಕ್ಕೆ ವರದಿ ನೀಡಲು ಸೂಚಿಸಲಾಯಿತು ಎಂದು ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.
ಈ ವ್ಯಾಪ್ತಿಯಲ್ಲಿ ಪಂಚಾಯ್ತಿಗೆ ಬೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ, ಶಿಕ್ಷಣಕಾರ್ಯಪಡೆ, ರಚನೆ ಮಾಡಿಲ್ಲದಿರುವುದು, ಮಕ್ಕಳ ಅಂಕಿಅಂಶಗಳನ್ನು ನಿರ್ವಹಿಸದಿರುವುದು, ಮಕ್ಕಳ ಅನುದಾನ ಬಳಕೆಗೆ ಸಂಬಂಧಿಸಿದಂತೆ ದಾಖಲೆ ಒದಗಿಸದಿರುವುದು ಸೇರಿದಂತೆ ಕರ್ತವ್ಯಲೋಪ ಎಸಗಿರುವ ಹೊಯಿಲ್ ದೊರೆ ಗ್ರಾಮ ಪಂಚಾಯ್ತಿ ಪಿಡಿಓ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಸಿರಾ ತಾಲ್ಲೂಕು ಪಂಚಾಯಿತಿ ಇಓ ರವರಿಗೆ ಇದೇ ವೇಳೆ ಅವರು ಸೂಚಿಸಿದರು.
ಏನೇ ಆದರೂ ಹೋದ ಜೀವ ಮತ್ತೆ ತಂದುಕೊಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ. ಮತ್ತು ಸಂತ್ರಸ್ತರಿಗೆ ನ್ಯಾಯ ಹಾಗೂ ಪರಿಹಾರ ಒದಗಿಸಲು ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿರಾ ತಾಲ್ಲೂಕಿನ ಬಿಇಓ, ಡಿವೈಎಸ್ಪಿ ರವರು, ಪಿಎಸ್ ಐ, ಮಕ್ಕಳ ರಕ್ಷಣಾಧಿಕಾರಿಗಳು ಇನ್ನಿತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q