ತಿಪಟೂರು: ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ನೂತನ ಸೈನ್ಸ್ ಕ್ಲಬ್ ಮತ್ತು ಇಕೋ ಕ್ಲಬ್ ನ ಉದ್ಘಾಟನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ನಂತರ ಕಾಲೇಜು ಆವರಣದಲ್ಲಿ 10 ಗಿಡಗಳನ್ನು ಹಸಿರುಪಡೆ ವತಿಯಿಂದ ನೆಡಲಾಯಿತು. ಸೈನ್ಸ್ ಕ್ಲಬ್ ವತಿಯಿಂದ ಸೈನ್ಸ್ ರಂಗೋಲಿ ಸ್ಪರ್ಧೆ ಹಾಗೂ ಪೋಸ್ಟರ್ ಡ್ರಾಯಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಂ.ಡಿ.ಶಿವಕುಮಾರ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರಾಜೇಶ್ ಪದ್ಮಾರ್ ರವರು ಆಗಮಿಸಿದ್ದರು. ಸೈನ್ಸ್ ಕ್ಲಬ್ ಕಾರ್ಯದರ್ಶಿಯಾದ ಡಾ. ಲೋಕೇಶ್ ಕೆ ಮತ್ತು ಸಹ ಕಾರ್ಯದರ್ಶಿ ಮಂಜುನಾಥ ಪಿ. ಎನ್. ರವರು ಎಲ್ಲರಿಗೂ ಸೈನ್ಸ್ ಕ್ಲಬ್ ನ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ರೂಢಿಸುವುದರ ಜತೆಗೆ, ಮಾನವೀಯ ಸಂವೇದನೆಗಳನ್ನು ಅರ್ಥೈಸಿಕೊಂಡು ಪರಿಸರಪೂರಕ ಮಾದರಿಯಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಉಪನ್ಯಾಸಕ ರಾಜೇಶ್ ಪದ್ಮಾರ್ ತಿಳಿಸಿದ್ದಾರೆ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವೈಜ್ಞಾನಿಕ ಸಾಧನೆಗಳು ಹೇರಳವಾಗಿತ್ತು. ಲೋಹಶಾಸ್ತ್ರದ ಸಂಶೋಧನೆಗಳಿಂದ ಪ್ರಾರಂಭಿಸಿ ಸುಶ್ರುತನ ಶಸ್ತ್ರಚಿಕಿತ್ಸೆಯ ಪ್ರಕಾರಗಳವರೆಗೆ ವಿಸ್ತೃತವಾಗಿ ವಿಜ್ಞಾನದ ಶಾಖೆಗಳು ಬೆಳೆದಿತ್ತು. ಪರಕೀಯರ ಆಕ್ರಮಣದ ತರುವಾಯ ಕುಂಠಿತಗೊಂಡ ವೈಜ್ಞಾನಿಕ ಆವಿಷ್ಕಾರಗಳು ಇದೀಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರಮೇಣ ವಿಕಸಿತಗೊಂಡಿವೆ. ಬಾಹ್ಯಕಾಶ ಕ್ಷೇತ್ರ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ಜಗತ್ತಿನ ಗಮನ ಸೆಳೆದಿವೆ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಸಂಶೋಧನಾ ಪ್ರವೃತ್ತಿ, ನಿತ್ಯಬದುಕಿನ ವಿಜ್ಞಾನದ ಬೆಳವಣಿಗೆಗಳ ಕುರಿತು ಕುತೂಹಲ, ನೈತಿಕ ಹಾಗೂ ಮನುಕುಲದ ಶಾಂತಿಗೆ ಪೂರಕವಾಗಿ ವಿಜ್ಞಾನ ಕ್ಷೇತ್ರದಲ್ಲಿ ನೂತನ ಸಾಧನೆಗಳನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ದೃಷ್ಟಿಕೋನದಲ್ಲಿ ವೈಜ್ಞಾನಿಕ ಪ್ರಗತಿಗಳೆಲ್ಲವೂ ಪ್ರಕೃತಿಗೆ ಪೂರಕವಾಗಿರಬೇಕು ಎಂಬುದು ಅನೇಕ ಸುಭಾಷಿತಗಳಲ್ಲಿ ವ್ಯಕ್ತಪಡಿಸಲಾಗಿದೆ. ಗಿಡವೊಂದನ್ನು ನೆಡುವುದು, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಕಡಿಮೆ ಬಳಕೆ ಎಲ್ಲರ ಕರ್ತವ್ಯವಾಗಬೇಕು ಎಂದು ರಾಜೇಶ್ ಪದ್ಮಾರ್ ತಿಳಿಸಿದರು.
ಸೈನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಡಿ ಶಿವಕುಮಾರ್ ರವರು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಪೋಸ್ಟರ್ ಸ್ಪರ್ಧೆಯಲ್ಲಿ ಅನುಷಾ, ಮಾನಸ ಆರ್., ಉಮೆಹಾ ಎಂಬ ವಿದ್ಯಾರ್ಥಿಗಳು ವಿಜೇತರಾದರು. ಸೈನ್ಸ್ ರಂಗೋಲಿ ಸ್ಪರ್ಧೆ ಯಲ್ಲಿ ಚಿನ್ಮಯಿ ಎಚ್.ಬಿ., ಮೇಘನಾ, ಗಗನಾ, ಭೈರವಿ ಮತ್ತು ಮಧುಶ್ರೀ ಎಂಬ ವಿದ್ಯಾರ್ಥಿಗಳು ವಿಜೇತರಾದರು. ಸೈನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಎಂ.ಡಿ.ಶಿವಕುಮಾರ್, ಹಿರಿಯ ಉಪನ್ಯಾಸಕರಾದ ಸಚ್ಚಿದಾನಂದ ಮೂರ್ತಿ, ಸೈನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಲೋಕೇಶ್ ಕೆ., ಸಹ ಕಾರ್ಯದರ್ಶಿ ಮಂಜುನಾಥ ಪಿ.ಎನ್., ಉಪನ್ಯಾಸಕರಾದ ರೇಣುಕಾ ಪ್ರಸಾದ್, ಹರ್ಷ ಕುಮಾರ್, ನೌಶಿನಾ ತರುನ್ನುಂ, ಕುಸುಮ, ಪನ್ನಗ, ಸಿಂದುಜಾ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q