ತಿಪಟೂರು: ತಿಪಟೂರು ಕಾಂಗ್ರೆಸ್ ಮುಖಂಡ, ನಿವೃತ್ತ ಎಸಿಪಿ ಲೋಕೇಶ್ವರ ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರ ಸಭೆಯನ್ನು ಭಾನುವಾರ ತಮ್ಮ ತೋಟದ ಮನೆಯಲ್ಲಿ ನಡೆಸಿ, ತಾಲ್ಲೂಕಿನ ಶಾಸಕರು, ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಭೆಯಲ್ಲಿ ಲೋಕೇಶ್ವರರ ಮುಂದಿನ ನಡೆಯ ಬಗ್ಗೆ ತೀವ್ರ ಚರ್ಚೆಗಳು ಆಗಿದ್ದು, ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಸಭೆಯೂ ಮಹತ್ವ ಪಡೆದಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿ ಕೆ.ಷಡಕ್ಷರಿರನ್ನು ಬೆಂಬಲಿಸಿದ್ದರು.
ಚುನಾವಣೆಯ ನಂತರದಲ್ಲಿ ಶಾಸಕ ಕೆ.ಷಡಕ್ಷರಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣದಿಂದ ದೂರ ಉಳಿದಿದ್ದ ಲೋಕೇಶ್ವರ, ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ ಎಂದು ಅತೃಪ್ತರ ಸಭೆಯನ್ನು ನಡೆಸಿದ್ದರು. ಸಭೆಯ ಮೂಲಕ ಜಿಲ್ಲೆ ಮತ್ತು ರಾಜ್ಯ ಮುಖಂಡರುಗಳ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಕಾಂಗ್ರೆಸ್ ಮುಖಂಡರು ಇತ್ತ ಗಮನ ನೀಡದಿರುವುದು ಬೇಸರ ಮೂಡಿಸಿದೆ. ಅಲ್ಲದೇ ವಿವಿಧ ಬೋರ್ಡ್ಗಳಿಗೆ ನಾಮ ನಿರ್ದೇಶನ ಮಾಡಿದಾಗಲೂ ಲೋಕೇಶ್ವರ ಹೆಸರು ಇಲ್ಲದಿರುವುದು ಆಘಾತಕ್ಕೆ ಕಾರಣವಾಗಿತ್ತು.
ಸಭೆಯ ಬಳಿಯ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್ವರ್, ತಾಲ್ಲೂಕಿನ ಶಾಸಕರ ನಡೆಯೂ ಬೇಸರ ಮೂಡಿಸಿದ್ದು, ತಾಲ್ಲೂಕಿನಲ್ಲಿ ಆಡಳಿತ ವೈಖರಿ ಹದಗೆಟ್ಟಿದೆ. ಜಿಲ್ಲೆಯ ಮತ್ತು ರಾಜ್ಯದ ನಾಯಕರನ್ನು ತನ್ನ ಪ್ರಭಾವ ಬಳಸಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಶಾಸಕ ಕೆ.ಷಡಕ್ಷರಿ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನಿಶ್ಚಯವಾಗಿದ್ದು ,ಜಿಲ್ಲೆಯ ಕಾಂಗ್ರೆಸ್ಸಿಗರು ಸಂಪರ್ಕಿಸಿ ಬೆಂಬಲ ಕೇಳಿದರೆ ಬೆಂಬಲಿಸಲು ನಿರ್ಧರಿಸಲಾಗುವುದು. ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಸಂಘಟನೆಯನ್ನು ಮಾಡಿದ್ದು ಮುಂದಿನ ಚುನಾವಣೆಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರುಗಳಾದ ಸೊಪ್ಪು ಗಣೇಶ್, ಆಶ್ರಿಫಾ ಬಾನು, ಭಾರತಿ ಮಂಜುನಾಥ್, ಮುನ್ನಾ, ಮುಖಂಡರುಗಳಾದ ಬಸವರಾಜು, ಹಳ್ಳಿಕಾರ್ ವಿನಯ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


