ಚುನಾವಣೆ ವೇಳೆ ಜನರಿಗೆ ನೀಡಿದ ಮಾತನ್ನು ಪಾಲಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿ, ಜನರ ಮನಸ್ಸಿನಲ್ಲಿ ಸುಳ್ಳಿನ ಗೋಪುರ ಕಟ್ಟಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನವಿರೋಧಿ ಆಡಳಿತದಲ್ಲಿ ತೊಡಗಿದೆ ಎಂದು ದೂರಿದರು.
ಕಬ್ಬಿಣ, ಸಿಮೆಂಟ್, ಇಂಧನ ಸೇರಿ ಅಗತ್ಯ ವಸ್ತುಗಳು ಬಿಜೆಪಿ ಆಡಳಿತದಲ್ಲಿ ಗಗನಕ್ಕೆ ಏರಿವೆ. ನಿರುದ್ಯೋಗ ಹೆಚ್ಚಾಗಿದೆ. ನಮಗೆ ಅಧಿಕಾರ ಕೊಟ್ಟರೆ ಎಲ್ಲ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಪ್ರತಿ ವ್ಯಕ್ತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೆವೆ. ಪೆಟ್ರೋಲ್, ಡಿಸೇಲ್ ಜನ ಸಾಮಾನ್ಯರ ಕೈಗೆಟುಕುವ ರೀತಿ ಬೆಲೆ ಇಳಿಸುತ್ತೇವೆ ಎಂದು ಅವರು ಹೇಳಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಎಂಟು ವರ್ಷದಲ್ಲಿ ತಾನು ಹೇಳಿದ್ದ ಭರವಸೆಗಳಲ್ಲಿ ಒಂದನ್ನು ಈಡೇರಿಸಿಲ್ಲ. ಬದಲಿಗೆ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.


