ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಕುಡಿಯುವ ನೀರಿಗೆ ತತ್ವಾರ ಇದೆ. ಕಾಂಗ್ರೆಸ್ ಸರ್ಕಾರ ಚುನಾವಣೆಯ ಹೊಂದಾಣಿಕೆಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಈ ಪಾಪರ್ ಸರ್ಕಾರದ ಬಳಿ ಬರ ಪರಿಹಾರ ನೀಡಲು ಹಣವಿಲ್ಲ. ಆದರೆ, ನೀರನ್ನು ಮಾತ್ರ ನೀಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರನ್ನು ಹರಿಸಿದೆ. ರೈತರು ಹೋರಾಟ ಮಾಡುತ್ತಿದ್ದಾರೆ. ಜನರು ಖಾಲಿ ಬಿಂದಿಗೆ ಹಿಡಿದುಕೊಂಡು ಬೀದಿಗಿಳಿದಿದ್ದಾರೆ.
ಬೆಂಗಳೂರಿನಲ್ಲಿ ನೀರಿಗೆ ಕೊರತೆಯಾಗಿದೆ. ಇಷ್ಟಾದರೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಾರೆ ಎಂದರೆ ಇಂತಹ ನಾಚಿಕೆಗೆಟ್ಟ ಸರ್ಕಾರ ಇತಿಹಾಸದಲ್ಲೇ ಇಲ್ಲ ಎನ್ನಬೇಕು. ನಮ್ಮ ಕುಡಿಯುವ ನೀರನ್ನು ಚುನಾವಣಾ ಹೊಂದಾಣಿಕೆಗಾಗಿ ಬಿಟ್ಟುಕೊಡುತ್ತಾರೆ. ಈಗಾಗಲೇ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡಿದ್ದಾರೆ. ಈಗ ಹೊಂದಾಣಿಕೆಗಾಗಿ ರಾಜ್ಯಕ್ಕೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆಂದು ಹೋರಾಟ ಮಾಡಿ, ಈಗ ಕೇಂದ್ರ ಸರ್ಕಾರ ಮಾಡಬೇಕು ಎನ್ನುತ್ತಿದ್ದಾರೆ. ಆಯವ್ಯಯದಲ್ಲಿ ಮೇಕೆದಾಟು ಯೋಜನೆಗೆ ನಯಾ ಪೈಸೆ ನೀಡಿಲ್ಲ. ಇವರಿಗೆ ಮಾನವಿದ್ದರೆ 10 ಸಾವಿರ ಕೋಟಿ ರೂಪಾಯಿಯನ್ನು ಈ ಯೋಜನೆಗೆ ಮೀಸಲಿಡಬೇಕಿತ್ತು. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ತೆಗೆದಿದ್ದು, ಜನರಿಗೆ ಕಲುಷಿತ ನೀರು ನೀಡಲಾಗುತ್ತಿದೆ. ಖಜಾನೆಯನ್ನು ಲೂಟಿ ಹೊಡೆಯುವುದರಲ್ಲಿ ಎಲ್ಲರೂ ನಿರತರಾಗಿದ್ದಾರೆ ಎಂದು ಅಶೋಕ್ ಹೇಳಿದರು.
ಯೋಗ್ಯತೆ ಇಲ್ಲದಿದ್ದರೆ ಕುರ್ಚಿ ಬಿಟ್ಟು ತೊಲಗಿ
ಕಾಂಗ್ರೆಸ್ ನಾಯಕರಿಗೆ ಬರ ಪರಿಹಾರ ತರಲು ಯೋಗ್ಯತೆ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಲಿ. ನಾವು ಸರ್ಕಾರ ನಡೆಸುವಾಗ ಕೇಂದ್ರದ ಕಡೆ ನೋಡದೆ ರೈತರಿಗೆ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಪಾಪರ್ ಆಗಿದ್ದು, ಕುಡಿಯುವ ನೀರಿಗೂ ಹಣವಿಲ್ಲ. ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲವಾದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಆರ್. ಅಶೋಕ್ ಆಗ್ರಹಿಸಿದರು.
ತೆಲಂಗಾಣ ಸಿಎಂ ಬಳಿ ಟ್ಯೂಶನ್ ಹೋಗಿ
ಬರ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಎಸ್‌ಡಿಆರ್‌ಎಫ್ ಹಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತಲುಪಿದೆ. ಎನ್‌ಡಿಆರ್‌ಎಫ್ ಹಣವನ್ನು ಕೇಂದ್ರ ಸರ್ಕಾರ ಒಟ್ಟಿಗೆ ತೀರ್ಮಾನ ಮಾಡಿ ಎಲ್ಲ ರಾಜ್ಯಗಳಿಗೆ ನೀಡುತ್ತದೆ. ಬಿಜೆಪಿ ಸರ್ಕಾರ ತಕ್ಷಣ ಪ್ರವಾಹ ಹಾನಿ ಪರಿಹಾರ ನೀಡಿದ್ದು, ಬಳಿಕ ಕೇಂದ್ರ ಸರ್ಕಾರ ಹಣ ನೀಡಿತ್ತು. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಇದೇ ರೀತಿ ತಡವಾಗಿ ಪರಿಹಾರ ನೀಡಲಾಗಿತ್ತು. ಆಗ ಬಾಯಿ ಬಡಿದುಕೊಳ್ಳದ ಕಾಂಗ್ರೆಸ್, ಈಗ ಮಾತ್ರ ಬಾಯಿ ಬಡಿಯುತ್ತಿದೆ. ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ ರಾಜಕೀಯ ಮಾಡುತ್ತಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪ್ರಧಾನಿಯ ಬಗ್ಗೆ ಉತ್ತಮವಾಗಿ ಮಾತನಾಡಿದ್ದಾರೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಅವರ ಬಳಿ ಟ್ಯೂಶನ್ ಪಡೆಯಲಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


