ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗೆ ರಚಿಸಲಾದ ಕಾಂಗ್ರೆಸ್ ಸದಸ್ಯರ ಸಮಿತಿಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಹುದ್ದೆ ರದ್ದು ಮಾಡಿ, ಶಾಸಕರಿಗೆ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಎರಡು ದಿನಗಳಿಂದ ವಿರೋಧ ಪಕ್ಷಗಳ ನಡೆಸುತ್ತಿದ್ದ ಧರಣಿ ಹಾಗೂ ಹೋರಾಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಯಾವುದೇ ಪಕ್ಷದ ಸರ್ಕಾರ ಇದ್ದಾಗ ಆ ಪಕ್ಷದ ಕಾರ್ಯಕರ್ತರಿಗೆ ಅವಕಾಶಗಳನ್ನು ಕೊಡುವುದು ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ಮಹಾರಾಷ್ಟ್ರದಲ್ಲಿ ಸಚಿವರಿಗೆ ಆರ್ ಎಸ್ ಎಸ್ ಕಾರ್ಯಕರ್ತರನ್ನು ಆಪ್ತ ಸಹಾಯಕರನ್ನಾಗಿ ಮಾಡಿಲ್ಲವೇ? ಕೆಕೆಆರ್ ಡಿಬಿಗೆ ಸಲಹೆ ಕೊಡಲು ಬಸವರಾಜಪಾಟೀಲ ಸೇಡಂ ನೇತೃತ್ವದಲ್ಲಿ ಸಂಸ್ಥೆಯೊಂದನ್ನು ಮಾಡಿ ಅದಕ್ಕೆ ಸರ್ಕಾರದಿಂದ ಹಣ ಕೊಟ್ಟಿರಲಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು, ‘ನೀವು ಕೂಡ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿಕೊಂಡಿಲ್ಲವೇ? ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಸಮಿತಿ ರೀತಿಯ ವ್ಯವಸ್ಥೆ ಮಾಡಿ ಅಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಬಳ ಕೊಟ್ಟು ಸಾಕುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಾನು ಮೊದಲು ಶಾಸಕನಾಗಿದ್ದೇನೆ. ಶಾಸಕರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಾನು ಗೌರವಿಸುತ್ತೇನೆ. ಯಾವುದೇ ಕಾರಣಕ್ಕೂ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳಲ್ಲಿ ಬದಲಾವಣೆ ಮಾಡುವುದಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಆರ್.ಅಶೋಕ, ಸಮಿತಿಯ ಅಧ್ಯಕ್ಷರು ಶಾಸಕರನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಅಗೌರವ ತೋರಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷರು ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳ ಪಟ್ಟಿ ಮಾಡಿ ವರ್ಗಾವಣೆಗೂ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಅಂತಹ ಸಮಸ್ಯೆಗಳನ್ನು ಎದುರಾದರೆ, ನನ್ನ ಗಮನಕ್ಕೆ ತನ್ನಿ, ಪರಿಹರಿಸಲಾಗುತ್ತದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4