ತುಮಕೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ನಗರದ ಬಿಜಿಎಸ್ (ಟೌನ್ಹಾಲ್) ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು ಚೀಲಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಇಟ್ಟು, ಭತ್ತ, ರಾಗಿ, ಜೋಳ ರಾಶಿಗಳನ್ನು ಹಾಕಿ ಪೂಜೆ ಸಲ್ಲಿಸಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಕಳುಹಿಸುವ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರವು ಅಕ್ಕಿ ಖರೀದಿಗೆ ಅವಕಾಶ ನಿರಾಕರಿಸಿರುವುದು ಖಂಡನೀಯ, ಬಿಜೆಪಿ ದ್ವೇಷ ರಾಜಕಾರಣ ಸಾಧಿಸುತ್ತಾ, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು, ಪಾರದರ್ಶಕ ವ್ಯವಸ್ಥೆಯಲ್ಲಿ ಖರೀದಿಗೆ ಸರ್ಕಾರವು ಎಫ್ಸಿಐಯನ್ನು ಕೇಳಲಾಗಿತ್ತು. ಕೇಂದ್ರದ ಬಳಿ ೭ ಲಕ್ಷ, ಮೆಟ್ರಿಕ್ ಟನ್ ದಾಸ್ತಾನು ಇದೆ. ಸರ್ಕಾರವು ಕೇವಲ ೨.೮೫ ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಲಾಗಿತ್ತು, ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಈ ಯೋಜನೆಯಲ್ಲಿ ರಾಜ್ಯದ ೧.೨೮ ಕೋಟಿ ಕುಟುಂಬಗಳು, ಸುಮಾರು ೪.೪೨ ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಸರ್ಕಾರ ಇದಕ್ಕೆ ಬೇಕಾಗುವ ೧೧,೦೦೦ ಕೋಟಿ ನೀಡಲು ಸಿದ್ಧವಿದ್ದರೂ ಸಹ ಮೋದಿ ಸರ್ಕಾರ, ಭಾರತೀಯ ಆಹಾರ ನಿಗಮಕ್ಕೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಿದಂತೆ ನಿರ್ದೇಶನ ನೀಡಿದೆ. ಭಾರತೀಯ ಆಹಾರ ನಿಗಮದ ಬಳಿ ಹೆಚ್ಚುವರಿ ಅಕ್ಕಿ ದಾಸ್ತಾನು ಇದೆ. ಕರ್ನಾಟಕ ರಾಜ್ಯಕ್ಕೆ ನೀಡಲು ಸಿದ್ಧವಿಲ್ಲ. ಆದರೂ ಎಫ್ಸಿಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಮುಂದಾಗಿದೆ ಎಂದು ಮುರಳೀಧರ ಹಾಲಪ್ಪ ಆರೋಪಿಸಿದರು.
ಕೇಂದ್ರ ಸರ್ಕಾರ ಹಾಗೂ ಎಲ್ಲಾ ಸಂಸದರಿಗೂ ನೆನಪಿರಲಿ ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಪ್ರಜಾಪ್ರಭುತ್ವದಲ್ಲಿದ್ದೇವೆ. ನಾವು ಬೆಳೆಯುವ ಬೆಳೆಯನ್ನು ನಮಗೆ ವಾಪಸ್ ಕೊಡಿ ಎಂದು ಕೇಳುತ್ತಿದ್ದೇವೆ. ನಾವು ಕೊಟ್ಟಂತಹ ತೆರಿಗೆ ಜಿಎಸ್ಟಿಯನ್ನು ನಮಗೆ ವಾಪಸ್ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಬಾಕಿಯನ್ನು ಚುಕ್ತಾ ಮಾಡಿ ಎಂದು ಕೇಳುತ್ತಿದ್ದೇವೆಯೇ ಹೊರತು ನಿಮ್ಮ ಬಳಿ ನಾವು ಭಿಕ್ಷಾಪಾತ್ರೆ ಹಿಡಿದಿಲ್ಲ ಎಂದರು.
ಈಗ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಗೂ ಹಬ್ಬುವ ಮುಂಚೆ ನಾವು ಕೇಳಿರುವ ೪.೪೨ ಕೋಟಿ ಜನಕ್ಕೆ ಅಕ್ಕಿಯನ್ನು ಪೂರೈಕೆ ಮಾಡಿ ಎಂದರು.
ದೇಶದ ಪ್ರಧಾನಿಗಳು ಕಳೆದ ೯ ವರ್ಷದಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ, ಮಾಧ್ಯಮದವರನ್ನು ಎದರುಸಿಲ್ಲ, ಶೋ ಪೀಸ್ ತರ ರೆಡಿಮೇಡ್ ಕಾರ್ಯಕ್ರಮಗಳನ್ನು ಈವೆಂಟ್ ಮ್ಯಾನೇಜ್ಮೆಂಟ್ನವರಿಗೆ ಕಾರ್ಯಕ್ರಮ ಕೊಟ್ಟು ಅದನ್ನು ನಿಭಾಯಿಸುವುದರಲ್ಲಿ ನಿಪುಣರಾಗಿದ್ದೀರಾ, ಈಗಲಾದರೂ ಎಚ್ಚೆತ್ತುಕೊಂಡು ಮುಂದಿನ ಲೋಕಸಭಾ ಚುನಾವಣೆ ಒಳಗೆ ಅಕ್ಕಿಯನ್ನು ಕೊಡಿ ಎಂದು ಆಗ್ರಹಿಸಿದರು.
ಭಾರತೀಯ ಆಹಾರ ನಿಗಮ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ’ ಎಂದು ಹೇಳಿರುವ ಕಮಿಟ್ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹಾಗೂ ಹಲವಾರು ಲೋಕಸಭಾ ಸದಸ್ಯರು ಸವಾಲು ಹಾಕಿದ್ದರು. ಪತ್ರ ತೋರಿಸಿದ ನಂತರ ಉಸಿರೇ ನಿಂತು ಹೋಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ, ರಾಜ್ಯದ ಪ್ರಜ್ಞಾವಂತ ಮತದಾರರು ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಲಕ್ಕಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ತೊಂದರೆ ನೀಡುವ ಸಲುವಾಗಿ ಇಂದು ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಿರಸ್ಕರಿಸಿರುವುದು ಖಂಡನೀಯ. ಹಸಿದ ಜನತೆಗೆ ಅನ್ನ ಕೊಡುವುದು ಸರ್ಕಾರ ಮತ್ತು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅದರ ಕರ್ತವ್ಯವಾಗಿದೆ ಎಂದರು.
ಮಾಜಿ ಶಾಸಕ ಹೆಚ್. ನಿಂಗಪ್ಪ ಮಾತನಾಡಿ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ೧೩೫ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿರುವುದು ಬಿಜೆಪಿಗೆ ಹೊಟ್ಟೆಕಿಚ್ಚು ಬಂದಿದೆ. ಕಾಂಗ್ರೆಸ್ ಪಕ್ಷ ಬಹುಮತಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿದ್ದರೆ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಬಹುದು ಎಂಬ ಆಲೋಚನೆಯಲ್ಲಿತ್ತು. ಆದರೆ ಅವರು ಅಂದುಕೊಂಡಂತಾಗಿಲ್ಲ, ಅದಕ್ಕೆ ಕಾಂಗ್ರೆಸ್ನ ಉಚಿತ ಯೋಜನೆಗಳಿಗೆ ತಡೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಬಡವರಿಗೆ ಅಕ್ಕಿ ನೀಡುವ ಯೋಜನೆ, ಶಕ್ತಿ ಯೋಜನೆ, ಪದವೀಧರರಿಗೆ ನಿರುದ್ಯೋಗ ಭತ್ಯೆ, ಗೃಹಜ್ಯೋತಿ ಯೋಜನೆಗಳು ಬರೀ ಕಾಂಗ್ರೆಸ್ಗೆ ಓಟು ಹಾಕಿದವರಿಗಷ್ಟೇ ಅಲ್ಲ, ಬಿಜೆಪಿಗೆ ಓಟು ಹಾಕಿದವರಿಗೂ ಹಾಗೂ ಜೆಡಿಎಸ್ಗೆ ಓಟು ಹಾಕಿದವರಿಗೂ ನಮ್ಮ ರಾಜ್ಯ ಸರ್ಕಾರ ಉಚಿತವಾಗಿ ಕೊಡುತ್ತಿದೆ ಎಂದರು.
ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು, ಜೂ.೨೦ ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ನಿಗಮದ ವಿರುದ್ಧ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದು, ತುಮಕೂರಿನ ಟೌನ್ ಹಾಲ್ ವೃತ್ತದಲ್ಲೂ ಅಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಹಲವಾರು ಮುಖಂಡರು ಮಾತನಾಡಿದರು, ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ, ರೆಡ್ಡಿಚಿನ್ನಯಲ್ಲಪ್ಪ, ಸಿದ್ದಲಿಂಗೇಗೌಡ, ಹೆಚ್.ಸಿ.ಹನುಮಂತಯ್ಯ, ರೇವಣಸಿದ್ದಯ್ಯ, ತರುಣೇಶ್, ನರಸೀಯಪ್ಪ, ಆಟೋರಾಜು, ಮಂಜುನಾಥ್, ಕೃಷ್ಣೆಗೌಡ, ನಟರಾಜು, ಡಾ.ವನಿತಾ, ಮರಿಚನ್ನಮ್ಮ, ಗಂಗಾಧರ್, ವಾಲೆಚಂದ್ರು, ನರಸಿಂಹಯ್ಯ, ಸೌಭಾಗ್ಯಮ್ಮ, ಮಂಜುಳಮ್ಮ, ಕಮಲಮ್ಮ, ರಾಜಪ್ಪ, ಪಾಲಿಕೆ ಸದಸ್ಯ ಮಹೇಶ್, ಬಸವರಾಜು, ವಸುಂಧರ, ಸುಮಾ, ಕವಿತಾ, ಅನ್ನಪೂರ್ಣಮ್ಮ, ಗೀತ, ಯಶೋದಮ್ಮ, ಗಿರಿಯಪ್ಪ, ಪುಟ್ಟಕಾಮಣ್ಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy