ಸರಗೂರು: ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಮುದಾಯದ ಭವನದಲ್ಲಿ ಮಂಗಳವಾರದಂದು ಸಂವಿಧಾನ ಸಮರ್ಪಣೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಎಸ್.ಡಿ.ಸಣ್ಣಸ್ವಾಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949 ರ ನವೆಂಬರ್ 26 ರಂದೇ, ಆದರೂ ಅನುಷ್ಠಾನಕ್ಕೆ ಬಂದಿದ್ದು 1950 ರ ಜನವರಿ 26ರಂದು. ಈ ದಿನವನ್ನು ಗಣರಾಜೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದರು.
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ. ಭಾರತದ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ ಎಂದರು.
ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುವಂತೆ 2015 ರ ನವೆಂಬರ್ 19 ಎಂದು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತು. ಇದಕ್ಕೂ ಮೊದಲು 2015ರ ಅಕ್ಟೋಬರ್ 11 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ನವೆಂಬರ್ 26 ರಂದು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಘೋಷಣೆ ಮಾಡಿದ್ದರು. ಅದರಂತೆ ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಎಸ್.ಡಿ.ಸಣ್ಣ ಸ್ವಾಮಿ ಸರಗೂರು, ಯಜಮಾನರಾದ ಬೊಗಯ್ಯ , ಭೀಮಯ್ಯ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಹನುಮಂತಯ್ಯ, ಪರಶಿವ, ಶಿವಮೂರ್ತಿ, ಪುಟ್ಟರಾಜು, ಕಾರಯ್ಯ, ಗೋಪಾಲ, ಭೋಗಪ್ಪ , ಮಹೇಶ, ಬಣ್ಣಯ, ದೊಡ್ಡಬೈರ, ಗ್ರಾಮಸ್ಥರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q