ತುಮಕೂರು: ಸಂವಿಧಾನದ ರಕ್ಷಣೆ ಮತ್ತು ಶೋಷಿತ ವರ್ಗಗಳ ಹಿತಕಾಯುವ ಉದ್ದೇಶದೊಂದಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಸಂವಿಧಾನ ರಕ್ಷಣಾ ನೀಲಿ ಸೇನೆ’ ರಾಜ್ಯ ಮಟ್ಟದ ಸಂಘಟನೆಯ ಉದ್ಘಾಟನಾ ಸಮಾರಂಭವು ಇಂದು (ಜನವರಿ 26, 2026) ನಗರದ ಎಂ.ಜಿ. ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾವಿರಾರು ಸೈನಿಕರ ಸಮ್ಮುಖದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು.
ರಾಜ್ಯಾಧ್ಯಕ್ಷರಾದ ಎಂ. ನರಸಿಂಹರಾಜು ಅವರು ಸಸಿಗೆ ನೀರೆರೆಯುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು. ನಂತರ ಮಾತನಾಡಿ, ಉದ್ಘಾಟನಾ ಭಾಷಣ ಮಾಡಿದ ರಾಜ್ಯಾಧ್ಯಕ್ಷ ಎಂ.ನರಸಿಂಹರಾಜು ಅವರು, “ಇಂದಿನ ರಾಜಕೀಯ ಸನ್ನಿವೇಶದಲ್ಲಿ ಮನುವಾದಿ ಶಕ್ತಿಗಳ ಕುತಂತ್ರದಿಂದಾಗಿ ಸಂವಿಧಾನವು ಅಪಾಯದಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಹಕ್ಕುಗಳಿಂದಲೇ ಇಂದು ಬಹುಜನರು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದರೆ, ಅಧಿಕಾರಕ್ಕಾಗಿ ಜಾತಿ-ಧರ್ಮಗಳ ಹೆಸರಿನಲ್ಲಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸವಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಬಂಗಾರಪ್ಪ (ಉಪಾಧ್ಯಕ್ಷರು) ಮಾತನಾಡಿ, ಸಂಘಟನೆಯಲ್ಲಿ ಎಲ್ಲಾ ಸಮುದಾಯದ ಪದಾಧಿಕಾರಿಗಳಿದ್ದು, ಸರ್ವರಿಗೂ ಸಮಾನ ನ್ಯಾಯ ಒದಗಿಸಲು ಇದು ಸಹಕಾರಿಯಾಗಿದೆ ಎಂದರು.
ನಂಜಪ್ಪ (ಪ್ರಧಾನ ಕಾರ್ಯದರ್ಶಿ ಮಾತನಾಡಿ, ಈ ಸಂಘಟನೆಯು ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಬಣ್ಣಿಸಿದರು.
ರಾಧಮ್ಮ (ಜಿಲ್ಲಾ ಮಹಿಳಾ ಅಧ್ಯಕ್ಷರು) ಮಾತನಾಡಿ, ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂವಿಧಾನ ರಕ್ಷಣೆಗಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೀಲಿ ಸೇನೆ ಸೇರಬೇಕು ಎಂದು ಕರೆ ನೀಡಿದರು.
ವಕೀಲ ಕೃಷ್ಣಪ್ಪ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ನೀಡಿದೆ. ಅದನ್ನು ರಕ್ಷಿಸಲು ನಾವು ಸೈನಿಕರಂತೆ ಕೆಲಸ ಮಾಡಬೇಕು ಎಂದರು.
ಕುದೂಷ್ ಅಹ್ಮದ್ (ಜಿಲ್ಲಾಧ್ಯಕ್ಷರು ಮಾತನಾಡಿ, ತುಮಕೂರಿನಿಂದ ಇಂತಹ ವಿಶಿಷ್ಟ ಸಂಘಟನೆ ಆರಂಭವಾಗಿರುವುದು ಹೆಮ್ಮೆಯ ವಿಷಯ. ಎಲ್ಲಾ ಸಮುದಾಯದವರು ಒಂದಾಗಿ ಈ ಶಕ್ತಿಯನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿವಲಿಂಗಮ್ಮ ಮತ್ತು ತಂಡದವರಿಂದ ದೇಶಭಕ್ತಿ ಗೀತೆ ಹಾಗೂ ನಂಜಪ್ಪ, ಸಂಪತ್ ಕುಮಾರ್ ಮತ್ತು ಚಿದಾನಂದಮೂರ್ತಿ ಅವರಿಂದ ಕ್ರಾಂತಿಗೀತೆಗಳ ಗಾಯನ ನಡೆಯಿತು. ರಾಜ್ಯ ಖಜಾಂಚಿ ಮೀನಾ ಕುಮಾರಿ ಸ್ವಾಗತಿಸಿದರೆ, ಜಿಲ್ಲಾ ಗೌರವಾಧ್ಯಕ್ಷ ಶಿವಕುಮಾರ್ ವಂದಿಸಿದರು. ಚಿದಾನಂದಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ಮಂಜುನಾಥ್, ಪ್ರಭಾಕರ ಐಹೊಳೆ, ದೊಡ್ಡಯ್ಯ, ಗಂಗಾಧರಯ್ಯ, ಮೂರ್ತಿ, ಗಂಗಾಧರ್ ಹಾಗೂ ಎಲ್ಲಾ ರಾಜ್ಯ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ನರಸಿಂಹಮೂರ್ತಿ, ತುಮಕೂರು ಜಿಲ್ಲಾ ಪ್ರದಾನ ಕಾರ್ಯದರ್ಶಿ ಓಂಕಾರಮೂರ್ತಿ, ಸಂಘಟನಾ ಸಂಚಾಲಕರಾದ ಚೆಲುವರಾಜು, ತುಮಕೂರು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಚಿ ನಾ ಹಳ್ಳಿ ತಾಲೂಕು ಅಧ್ಯಕ್ಷರಾದ ಮಹೇಶ್, ಎಲ್ಲಾ ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


