ತುಮಕೂರು: ಪ್ರತಿಯೊಬ್ಬ ಗ್ರಾಹಕನು ತಾನು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ನ್ಯೂನ್ಯತೆ/ಕೊರತೆಗಳು ಕಂಡು ಬಂದರೆ ಪ್ರಶ್ನಿಸುವ ಹಕ್ಕನ್ನು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಜಿ.ಟಿ.ವಿಜಯಲಕ್ಷ್ಮೀ ಕರೆ ನೀಡಿದರು.
ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಯಾವುದೇ ಸಾಮಗ್ರಿ ಖರೀದಿಸಿದಲ್ಲಿ ಕಡ್ಡಾಯವಾಗಿ ವ್ಯಾಪಾರಸ್ಥರಿಂದ ರಸೀದಿ ಪಡೆಯಬೇಕು. ಸಾಮಗ್ರಿ ಕೊಳ್ಳುವ ಮುನ್ನ ನಿವ್ವಳ ತೂಕ, ಅಳತೆ, ತಯಾರಾದ ತಿಂಗಳು ಮತ್ತು ವರ್ಷ, ಗರಿಷ್ಠ ಮಾರಾಟ ಬೆಲೆ(ಎಂಆರ್ ಪಿ), ತಯಾರಕರ ಹೆಸರು, ಮತ್ತಿತರ ಮಾಹಿತಿಯನ್ನು ಗ್ರಾಹಕ ಹೊಂದಿರಬೇಕು. ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಸ್ಥರನ್ನು ಪ್ರಶ್ನಿಸುವ ಹಕ್ಕು ಗ್ರಾಹನಿಗಿರುತ್ತದೆ ಎಂದು ತಿಳಿಸಿದರು.
ಗ್ರಾಹಕ ಕಾಯ್ದೆಯನ್ವಯ ಯಾವುದೇ ವ್ಯಾಪಾರ/ವ್ಯವಹಾರಗಳನ್ನು ಪ್ರಮಾಣಬದ್ದ ಮಾನಕ(ಕೆ.ಜಿ./ಗ್ರಾಂ, ಮೀಟರ್/ಸೆಂ.ಮೀ/ಮಿಲಿ ಮೀಟರ್, ಲೀಟರ್/ಮಿಲಿ ಲೀಟರ್)ಗಳಲ್ಲಿಯೇ ಮಾಡಬೇಕು. ಇಂಚು, ತೊಲ, ಗಜ, ಸೇರು, ಪಾವು ಇತ್ಯಾದಿಗಳಲ್ಲಿ ಅಳತೆ ಮಾಡಬಾರದು. ಗ್ರಾಹಕನಿಗೆ ಸರಕು ಖರೀದಿ/ಸೇವೆ ಪಡೆಯುವಲ್ಲಿ ಮೋಸವಾದಲ್ಲಿ ಕಾನೂನು ಮೊರೆ ಹೋಗಲು ಅವಕಾಶವಿದೆ. ಇಂತಹ ದೂರುಗಳನ್ನು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದಾಖಲಿಸಿ, ನ್ಯಾಯ ಪಡೆಯಬಹುದಾಗಿದೆ ಎಂದು ಹೇಳಿದರು.
ಸರಕು ಖರೀದಿಯಲ್ಲಿ ನ್ಯೂನ್ಯತೆ ಕಂಡು ಬಂದಾಗ ಗ್ರಾಹಕನು ತನ್ನ ದೂರನ್ನು ಜಿಲ್ಲಾ ಗ್ರಾಹಕ ವೇದಿಕೆಗೆ ಉಚಿತವಾಗಿ ದಾಖಲಿಸಬಹುದಾಗಿದ್ದು, 5 ಲಕ್ಷ ರೂ. ಮೌಲ್ಯದ ಸರಕು ನ್ಯೂನ್ಯತೆಯನ್ನು ಜಿಲ್ಲಾ ಮಟ್ಟದಲ್ಲಿ, 5 ರಿಂದ 10 ಲಕ್ಷ ರೂ.ಗಳವರೆಗೆ 200 ರೂ., 10 ರಿಂದ 20 ಲಕ್ಷ ರೂ.ಗಳವರೆಗೆ 400 ರೂ. ಹಾಗೂ 20 ರಿಂದ 50 ಲಕ್ಷ ರೂ. ಗಳವರೆಗಿನ ಸರಕು ಖರೀದಿಯಲ್ಲಿ ನ್ಯೂನ್ಯತೆಗೆ 1000 ರೂ.ಗಳ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ನ್ಯಾಯ ದೊರೆಯದಿರುವ ಗ್ರಾಹಕರು ರಾಜ್ಯ–ರಾಷ್ಟ್ರ ಮಟ್ಟದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರಮಟ್ಟದಲ್ಲಿಯೂ ನ್ಯಾಯ ದೊರೆಯದೆ ಹೋದಲ್ಲಿ ಅಂತಿಮವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ವಕೀಲ ಹಾಗೂ ಗ್ರಾಹಕರ ಜಾಗೃತಿ ಹಕ್ಕು ಮತ್ತು ಶಿಕ್ಷಣ ಪರಿಷತ್ತಿನ ಕಾರ್ಯದರ್ಶಿ ಟಿ.ಎಸ್. ನಿರಂಜನ್ ಮಾತನಾಡಿ, ವಸ್ತು ಕೊಳ್ಳುವಾಗ, ಆನ್ ಲೈನ್ ಮೂಲಕ ವ್ಯವಹರಿಸುವಾಗ ಗ್ರಾಹಕರು ಎಚ್ಚರದಿಂದಿರಬೇಕು. ಸಿಕ್ಕಿದ್ದನ್ನು ಖರೀದಿಸುವ ಕೊಳ್ಳಬಾಕ ಸಂಸ್ಕೃತಿಯನ್ನು ಬಿಡಬೇಕು. ಯಾವುದೇ ಆನ್ಲೈನ್ ಲಿಂಕ್ಗಳಿಗೆ ಭೇಟಿ ನೀಡುವುದು, ಓಟಿಪಿ/ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು ಎಂದು ತಿಳಿಸಿದರಲ್ಲದೆ, ಗ್ರಾಹಕರು ಸೇವಾ ನ್ಯೂನ್ಯತೆಗಾಗಿ ಕಡಿಮೆ ಅವಧಿಯಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ದೂರನ್ನು ಗ್ರಾಹಕರೇ ನೇರವಾಗಿ ದಾಖಲಿಸಬಹುದಾಗಿದ್ದು, ವಕೀಲರ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಗ್ರಾಹಕರು ತ್ವರಿತ ನ್ಯಾಯಕ್ಕಾಗಿ ಸಹಾಯವಾಣಿ ಸಂಖ್ಯೆ 1915ನ್ನು ಸಂಪರ್ಕಿಸಬಹುದು. ಖರೀದಿಸುವ ಉತ್ಪನ್ನದ ಮೇಲೆ ಐಎಸ್ ಐ ಚಿನ್ಹೆ ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ವಸ್ತುವಿನ ಗುಣಮಟ್ಟದ ಬಗ್ಗೆ ಅರಿವು ಹೊಂದಿರಬೇಕು. ಯಾವುದೇ ಜಾಹೀರಾತುಗಳಿಗೆ ಮಾರುಹೋಗದೆ ಗುಣಮಟ್ಟದ ವಸ್ತುಗಳನ್ನು ಕೊಳ್ಳುವ ಬಗ್ಗೆ ಜಾಗೃತಿ ಹೊಂದಿರಬೇಕು ಎಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಇದಕ್ಕೂ ಮುನ್ನ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳಿಂದ ಗ್ರಾಹಕ ಹಕ್ಕುಗಳ ರಕ್ಷಣೆ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು.
ಗ್ರಾಹಕ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. “ಲಭ್ಯವಿರುವ ಅಂತರ್ಜಾಲ ಸೇವೆಗಳು ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸುತ್ತವೆ” ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಪರ ಹಾಗೂ ವಿರೋಧ ಚರ್ಚಾ ಸ್ಪರ್ಧೆಯಲ್ಲಿ ಪರವಾಗಿ ಇಂಕಿತಾ, ಈರಣ್ಣ, ಪೃಥ್ವಿ ಎಂ.ಆರ್.; ವಿರೋಧವಾಗಿ ಜಿ. ದೀಪಲಕ್ಷ್ಮಿ, ಹರೀಶ್ ಕುಮಾರ್, ಸಾಕ್ಷಿ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.
ಭಾರತದಲ್ಲಿ ಗ್ರಾಹಕರ ಹಕ್ಕುಗಳ ಸಂರಕ್ಷಣೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಆಶಾ ಬಿ.ಎಲ್., ರಾಹುಲ್ ದುಂಗಾವತ್, ರಾಧಿಕಾ ಕೆ.ಎ.; ಡ್ಯಾಂಗ್ಲರ್ಸ್ ಸ್ಪರ್ಧೆಯಲ್ಲಿ ಲಕ್ಷಿತಾ ರಾಣಿ ಟಿ.ಎಸ್., ಮೋನಿಷ, ಆಶಾ ಬಿ.ಎಲ್. ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಶರಣ್ಯ ಹಾಗೂ ನಂದಿತ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಂಶುಪಾಲೆ ಡಾ.ಮಮತಾ ಕ್ಯಾತಣ್ಣನವರ್ ಅತಿಥಿ ಪರಿಚಯ ಮಾಡಿಕೊಟ್ಟರು. ವಿದ್ಯೋದಯ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್. ರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಕೆ. ಚಂದ್ರಣ್ಣ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎನ್.ರವೀಶ್, ಐಕ್ಯೂಎಸಿ ಮುಖ್ಯಸ್ಥ ಕುಮಾರ್, ಕಾನೂನು ವಿದ್ಯಾರ್ಥಿಗಳು, ಬೋಧಕ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾನೂನು ವಿದ್ಯಾರ್ಥಿನಿ ಅನಘ ಹತ್ವಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಶಮಾ ಸೈಯದಿ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4