ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಸುಪ್ರಸಿದ್ಧ ಕಮನೀಯ ಕ್ಷೇತ್ರದ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿ ವರ್ಷವೂ ಸಂಕ್ರಾಂತಿ ಮುಗಿದ ಮಾರನೇ ದಿನ ರಾಸುಗಳ ಜಾತ್ರೆ ಪ್ರಾರಂಭವಾಗಿ, ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ಭಾರೀ ರಾಸುಗಳ ಜಾತ್ರೆ ನಡೆಯುತ್ತಿತ್ತು. ರಾಸುಗಳ ಜಾತ್ರೆ ಮುಗಿದ ನಂತರ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಜಾತ್ರೆಗೆ ನಿರ್ಬಂಧ ಹಾಕಲಾಗಿದೆ.
ಕೊವಿಡ್ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಜಾತ್ರೆ ನಡೆದಂತೆ ತಾಲ್ಲೂಕು ಆಡಳಿತವು ನಿರ್ಬಂಧವನ್ನು ವಿಧಿಸಿದ್ದು, ಈ ವಿಚಾರ ತಿಳಿಯದೇ ರಾಸುಗಳನ್ನು ಮಾರಲು ಮತ್ತು ಕೊಳ್ಳಲು ಬಂದ ರೈತರು ನಿರಾಸೆಯಿಂದ ತಮ್ಮ ಊರಿಗೆ ತೆರಳುವಂತಾಗಿದೆ.
ಈ ಸಂಬಂಧ ತಾಲೂಕ ದಂಡಾಧಿಕಾರಿ ನಹಿದಾ ಜಮ್ ಜಮ್ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭ ಜಾತ್ರೆ ಉರೂಸ್ ಇನ್ನಿತರ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಮುಖೇನ ಸೂಚನೆ ಹೊರಡಿಸಲಾಗಿದೆ. ಆದರೂ ಕ್ಯಾಮೆನಹಳ್ಳಿಯ ಜಾತ್ರೆ ಇದೆ ಎಂದುಕೊಂಡು ಜನರು ಜಾನುವಾರುಗಳನ್ನು ಮಾರಲು ಮುಂದಾಗಿದ್ದಾರೆ .ಆದರೆ ಈಗ ಇದ್ಯಾವುದೂ ನಡೆಯುವುದಕ್ಕೆ ಅವಕಾಶವಿಲ್ಲ ಕಾರಣ ಕೊರೊನಾ ಎಂಬ ಮಾಹಾಮಾರಿಯು ರಾಜ್ಯ ಜಿಲ್ಲೆ ಸೇರಿದಂತೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ಸಾರ್ವಜನಿಕರು ಅಧಿಕಾರಿಗಳ ಜತೆ ಸೌಮ್ಯದಿಂದ ವರ್ತಿಸಿ ಅಧಿಕಾರಿಗಳು ಹೇಳಿದಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಯಾವುದೇ ರೋಗರುಜಿನಗಳು ಬರದಂತೆ ಸಹಕರಿಸಿ ದಯವಿಟ್ಟು ಯಾವುದೇ ಜಾತ್ರೆ ಸಮಾರಂಭಗಳನ್ನು ಇಂತಹ ಸಮಯದಲ್ಲಿ ಮಾಡಬೇಡಿ ಎಂದು ರೈತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು .
ಇನ್ನೂ ಜಾತ್ರೆ ಇದೆ ಎಂದು ಆಗಮಿಸಿದ್ದ ರೈತರೊಬ್ಬರು ಮಾತನಾಡಿ, ಬಹಳ ವರ್ಷಗಳಿಂದ ನಾವು ಈ ಜಾತ್ರೆಗೆ ಬರುತ್ತಿದ್ದೆವು. ನಾವಲ್ಲದೆ ರಾಜ್ಯದ ಅನೇಕ ಭಾಗಗಳಿಂದ ರೈತರು ಬರುತ್ತಿದ್ದರು. ಜಾನುವಾರುಗಳನ್ನು ಮಾರುವುದು, ತೆಗೆದುಕೊಳ್ಳುವುದು ಮಾಡುತ್ತಿದ್ದೆವು. ಆದರೆ ಈ ಬಾರಿ ಜಾತ್ರೆ ಇದೆ ಎಂದುಕೊಂಡು ಬಂದಿದ್ದವು. ಇಲ್ಲಿಗೆ ಬಂದಾಗ ಅರ್ಥವಾಯ್ತು. ಪೋಲಿಸ್ ಅಧಿಕಾರಿಗಳು ಜಾತ್ರೆ ನಡೆಯುವುದಿಲ್ಲ, ಊರುಗಳಿಗೆ ಹಿಂತಿರುಗಿ ಎಂದು ತಿಳಿಸಿದರು. ಅದರಂತೆ ನಾವು ವಾಪಸ್ ತೆರಳುತ್ತಿದ್ದೇವೆ ಎಂದು ನಿರಾಸೆ ವ್ಯಕ್ತಪಡಿಸಿದರು.
ಇನ್ನೂ ಈ ವಿಚಾರವಾಗಿ ದೇವಸ್ಥಾನದ ಸಮಿತಿ ಅಧ್ಯಕ್ಷ ಬಾಲರಾಜು ಮಾತನಾಡಿ, ನಾವು ಈಗಾಗಲೇ ಜಾತ್ರೆ ನಡೆಯುವುದಿಲ್ಲ ಎಂದು ಪಾಂಪ್ಲೆಟ್ ಮುಖಾಂತರ ಎಲ್ಲಾ ಹಳ್ಳಿಗಳಿಗೂ ಹಾಗೂ ನಮ್ಮ ತಾಲ್ಲೂಕಿನ ಗಡಿ ಭಾಗದವರೆಗೂ ತಿಳಿಸಿದ್ದೇವೆ. ಆದರೂ ಕೆಲವು ಕಿಡಿಗೇಡಿಗಳು ಮಾಡಿರುವ ವದಂತಿಯಿಂದ ಜಾತ್ರೆಯಿದೆ ಎಂದು ತಿಳಿದುಕೊಂಡು ರೈತರು ದೂರದ ಊರುಗಳಿಂದ ಆಗಮಿಸಿದ್ದರು. ಅವರಿಗೆ ಜಾತ್ರೆ ಇಲ್ಲವೆಂದು ಅರ್ಥ ಮಾಡಿಸಿ ವಾಪಸ್ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy