ತುಮಕೂರು: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಅತಿ ವೇಗವಾಗಿ ಹರಡುತ್ತಿರುವುದು ಆತಂಕಕಾರಿಯಾಗಿದ್ದು, ಜನವರಿ ಕೊನೆಯ ಅಥವಾ ಫೆಬ್ರವರಿ ಮೂರನೇ ಅಲೆ ಅಪ್ಪಳಿಸುವ ಬಗ್ಗೆ ಈಗಾಗಲೇ ಕಾನ್ಪುರದ ಐಐಟಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ ಎರಡನೇ ಅಲೆಯ ಬಗ್ಗೆ ತಜ್ಞರ ವರದಿಯನ್ನು ಕಡೆಗಣಿಸಿತ್ತು. ಅದರ ಪರಿಣಾಮ ಲಕ್ಷಾಂತರ ಜನ ಜೀವ ಕಳೆದುಕೊಳ್ಳುವಂತಾಗಿದ್ದು ದುರಂತ ಇತಿಹಾಸ ಎಂದರು.
ಓಮಿಕ್ರಾನ್ ಕೊರೊನಾ ರೂಪಾಂತರ ತಳಿಗಳಲ್ಲೇ ಅತಿ ಕ್ಷಿಪ್ರವಾಗಿ ಹರಡುವ ಗುಣ ಹೊಂದಿದೆ. ಭಾರತದಂತಹ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸೋಂಕು ಹರಡುವ ಸಾಧ್ಯತೆ ಇನ್ನೂ ಹೆಚ್ಚು. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕು ತಡೆಗೆ ಈಗಾಗಲೇ ಮುಂದಾಗಬೇಕು. ಆಕ್ಸಿಜನ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳಿಗೆ ಈಗಿನಿಂದಲೇ ಆದ್ಯತೆ ನೀಡಬೇಕು ಎಂದಿ ಒತ್ತಾಯಿಸಿದರು.
ಓಮಿಕ್ರಾನ್ ವಿಚಾರದಲ್ಲಿ ಜನರು ಕೂಡ ಮೈ ಮರೆಯಬಾರದೆಂದು ವಿನಂತಿಸುತ್ತೇನೆ. ಸೋಂಕು ತಡೆಗೆ ಸ್ವಯಂ ಜಾಗೃತಿಯು ಅತಿ ಮುಖ್ಯ. ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಎರಡನೆ ಅಲೆಯ ದುರಂತದ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ತರವಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಮೊದಲನೆ ಮತ್ತು ಎರಡನೆ ಅಲೆಯ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯುಳ್ಳ ಅನೇಕ ಸಮಾಜ ಸೇವಕರು, ಅನ್ನದಾನ, ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಅಂತಿಮ ಸಂಸ್ಕಾರ ಕೂಡ ಮಾಡಿದ್ದಾರೆ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ವಿವಿಧ ಸಮಾಜದವರು ಆಸ್ಪತ್ರೆಗಳನ್ನ ತೆರೆದು ಜನರಲ್ಲಿ ಶಕ್ತಿ ತುಂಬಿ ಜೀವ ರಕ್ಷಣೆ ಮಾಡಿದ್ದಾರೆ. ಇವರೆಲ್ಲರ ಸೇವೆಯು ಇನ್ನು ಮುಂದೆಯೂ ಅವಶ್ಯಕವಾಗಿದೆ ಎಂದರು.
ಮುಂಜಾಗ್ರತೆ ಕ್ರಮಗಳನ್ನು ತಗೆದುಕೊಳ್ಳುವಲ್ಲಿ ಸ್ವಲ್ಪವೂ ಎಡವಿದ್ದಲ್ಲಿ ಕೈಚೆಲ್ಲುವ ಹಂತ ತಲುಪುವ ಆಶಂಕೆ ಇರುವುದರಿಂದ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವ ಕೊರೊನಾ ವಾರಿಯರ್ಸಗಳ ಸಭೆಯನ್ನು ಕರೆದು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಕರೋನ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗ ಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕಾರ್ಯೋನ್ಮುಖರಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನು ಅನುಸರಿಸಿ ಹೆಚ್ಚು ಸಾವು ನೋವುಗಳಿಂದ ಜನರ ರಕ್ಷಣೆ ಮಾಡಬೇಕಂದು ಅವರ ಮನವಿ ಮಾಡಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy