ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯೊಬ್ಬರು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ ಸಾಯಿಸಲು ಯತ್ನಿಸಿ, ಬಳಿಕ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಭೀಕರ ಘಟನೆಯಲ್ಲಿ ಮಗು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.
ಹೊಸಕೋಟೆ ಗ್ರಾಮದ ನಿವಾಸಿಗಳಾದ ದರ್ಶನ್ ಮತ್ತು ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆ.ಆರ್. ಪೇಟೆ ಪಟ್ಟಣದ ಜಯನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಈ ದಂಪತಿ ವಾಸವಿದ್ದರು. ಇಂದು ಬೆಳಿಗ್ಗೆ ದಂಪತಿ ನಡುವೆ ತೀವ್ರ ಗಲಾಟೆ ನಡೆದಿದ್ದು, ಇದರಿಂದ ಮನನೊಂದು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ತಾವೂ ಸಾಯುವ ಮೊದಲು ತಮ್ಮ ಎರಡು ವರ್ಷದ ಮಗು ಅನಾಥವಾಗಬಾರದೆಂಬ ಉದ್ದೇಶದಿಂದಲೋ ಏನೋ, ಮಗುವಿನ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾರೆ. ಮಗು ಪ್ರಜ್ಞೆ ತಪ್ಪಿಬಿದ್ದಾಗ ಅದು ಸಾವನ್ನಪ್ಪಿದೆ ಎಂದು ಭಾವಿಸಿದ ದರ್ಶನ್ ಮತ್ತು ದಿವ್ಯಶ್ರೀ, ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದಂಪತಿ ಮೃತಪಟ್ಟಿದ್ದರು. ಆದರೆ, ಕತ್ತು ಹಿಸುಕಲ್ಪಟ್ಟಿದ್ದ ಮಗು ಇನ್ನೂ ಉಸಿರಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕೆ.ಆರ್. ಪೇಟೆ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೇ ಈ ಘಟನೆಗೆ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಅಂದಾಜಿಸಿದ್ದಾರೆ. ಹೆತ್ತವರ ಸಾವಿನಿಂದ ಮಗು ಈಗ ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


