ಕೊರೊನಾ ಸೋಂಕು ನಾಗಾಲೋಟದಲ್ಲಿ ಸಾಗುತ್ತಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 2.7 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 225 ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದರ ಜತೆಯಲ್ಲಿ 7743 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಕೊರೊನಾ ಸೋಂಕಿನಿಂದ 314 ಮಂದಿ ಸಾವನ್ನಪ್ಪಿದ್ದಾರೆ.
ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಸಂಖ್ಯೆ ಶೇ.16.28ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ ಒಂದೇ ದಿನದಲ್ಲಿ 1,38,331 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಒಟ್ಟು 15,50,357 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 314 ಮಂದಿ ಕೋವಿಡ್‍ನಿಂದ ಮೃತಪಟ್ಟಿರುವುದು ಸೇರಿದಂತೆ ದೇಶಾದ್ಯಂತ ಈ ಸೋಂಕಿಗೆ ಸುಮಾರು 4,48,549 ಮಂದಿ ಬಲಿಯಾಗಿದ್ದಾರೆ.ನವದೆಹಲಿ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ, ಮಣಿಪುರ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕೊರೊನಾ ಸೋಂಕು ಹೆಚ್ಚಾಗದಂತೆ ಈ ರಾಜ್ಯಗಳಲ್ಲಿ ರ್ಯಾಲಿ, ಮೆರವಣಿಗೆಗಳನ್ನು ಕೆಲ ದಿನಗಳ ಕಾಲ ಚುನಾವಣಾ ಆಯೋಗ ತಡೆಹಿಡಿದಿದೆ.
ಹಲವು ರಾಜ್ಯಗಳಲ್ಲಿ ಸೋಂಕು ಉಲ್ಬಣಗೊಳ್ಳದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೀಕೆಂಡ್ ಕಫ್ರ್ಯೂ, ನೈಟ್ ಕರ್ಫ್ಯೂ, ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಹಲವು ಕ್ರಮಗಳನ್ನು ಜರುಗಿಸಲಾಗಿದೆ. ಈ ನಡುವೆಯೂ ಕೂಡ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾವು-ನೋವು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ವರದಿ: ಆಂಟೋನಿ ಬೇಗೂರು