ಬೆಂಗಳೂರು: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರ ಜೊತೆ ಚರ್ಚಿಸಿದ ಬಳಿಕ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ನಾಳಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಔಪಾಚಾರಿಕವಾಗಿ ತಜ್ಞರ ಜೊತೆ ಚರ್ಚೆ ನಡೆಸಲಿದ್ದೇನೆ. ಓಮಿಕ್ರಾನ್ ಮತ್ತು ಕೋವಿಡ್ ಸೋಂಕಿನ ಬಗ್ಗೆ ಚರ್ಚೆ ಮಾಡಲಾಗುವುದು. ಕ್ಲಸ್ಟರ್ ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಜನರ ಆರೋಗ್ಯ ಮತ್ತು ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುತ್ತೇವೆ ಎಂದರು. ತಜ್ಞರು ಯಾವೆಲ್ಲ ಸಲಹೆಗಳನ್ನು ನೀಡುತ್ತಾರೋ ನೋಡಬೇಕು ಎಂದರು.
ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿಯಂತ್ರಿಸಲು ಯಾವೆಲ್ಲ ಪರಿಹಾರ ಕೈಗೊಳ್ಳಬೇಕೋ ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ನೀಡಿದರು.
ಸದ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಮೈಮರೆಯದೆ ಎಚ್ಚರಿಕೆ ವಹಿಸಬೇಕೆಂದು ಇದೇ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700