ತುಮಕೂರು: ಜಿಲ್ಲೆಯಲ್ಲಿ ಅಡುಗೆ ಅನಿಲ (LPG) ಸಿಲಿಂಡರ್ ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಈಗ ಇಂದಿರಾ ಕ್ಯಾಂಟೀನ್ ಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ನಗರದ ಇಂದಿರಾ ಕ್ಯಾಂಟೀನ್ ಗಳು ಮುಚ್ಚುವ ಹಂತಕ್ಕೆ ತಲುಪಿವೆ.
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಮುಖ್ಯ ಕ್ಯಾಂಟೀನ್ ನಲ್ಲಿ ಅಡುಗೆ ತಯಾರಿಸಿ ನಗರದ ವಿವಿಧೆಡೆ (ಕ್ಯಾತ್ಸಂದ್ರ, ಶಿರಾ ಗೇಟ್, ಮಂಡಿಪೇಟೆ, ಜಿಲ್ಲಾ ಆಸ್ಪತ್ರೆ ಮತ್ತು ಅಂತರಸನಹಳ್ಳಿ ಮಾರುಕಟ್ಟೆ) ಇರುವ ಕ್ಯಾಂಟೀನ್ ಗಳಿಗೆ ಊಟ–ತಿಂಡಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಗುರುವಾರದಿಂದ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ.
ಪ್ರತಿದಿನ ಅಡುಗೆ ತಯಾರಿಕೆಗೆ 1 ರಿಂದ 2 ಸಿಲಿಂಡರ್ ಗಳ ಅಗತ್ಯವಿದೆ. ಸಿಲಿಂಡರ್ ಲಭ್ಯವಿಲ್ಲದ ಕಾರಣ ಶುಕ್ರವಾರದಿಂದ ಕ್ಯಾಂಟೀನ್ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. “ಬೇರೆಯವರಿಂದ ಒಂದು ಸಿಲಿಂಡರ್ ಸಾಲವಾಗಿ ಕೇಳಿದ್ದೇವೆ, ಅದು ಸಿಕ್ಕರೆ ಮಾತ್ರ ಕ್ಯಾಂಟೀನ್ ನಡೆಯುತ್ತದೆ, ಇಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತದೆ” ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೋಟೆಲ್‌ಗಳಿಗೂ ಸಂಕಷ್ಟ: ವಾಣಿಜ್ಯ ಸಿಲಿಂಡರ್ ಗಳ ಕೊರತೆಯಿಂದ ನಗರದ ಖಾಸಗಿ ಹೋಟೆಲ್‌ಗಳೂ ಸಂಕಷ್ಟಕ್ಕೆ ಸಿಲುಕಿವೆ. ದೋಸೆ ಸೇರಿದಂತೆ ಇತರೆ ತಿಂಡಿಗಳ ತಯಾರಿಕೆಯನ್ನು ಕಡಿತಗೊಳಿಸಲಾಗಿದೆ. ಕೆಲವು ಹೋಟೆಲ್‌ಗಳಲ್ಲಿ ವಿದ್ಯುತ್ ಚಾಲಿತ ಕುಕ್ಕರ್‌ಗಳನ್ನು ಬಳಸಲಾಗುತ್ತಿದೆ.
ಸಿಎನ್ ಜಿ ದರ ವ್ಯತ್ಯಾಸ: ಇದೇ ವೇಳೆ ನಗರದ ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಸಿಎನ್ ಜಿ (CNG) ಇಂಧನದ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದು, ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಬಂಕ್‌ನಲ್ಲಿ ₹69 ಇದ್ದರೆ, ಮತ್ತೊಂದೆಡೆ ₹89 ರವರೆಗೆ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಅಡುಗೆ ಅನಿಲದ ಈ ಅಭಾವದಿಂದಾಗಿ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಇಂದಿರಾ ಕ್ಯಾಂಟೀನ್ ನಂಬಿಕೊಂಡಿರುವ ಸಾವಿರಾರು ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


