ಕೊರಟಗೆರೆ: ಗೃಹ ಸಚಿವರ ತವರಲ್ಲಿ ಇಲ್ಲ ದಲಿತರಿಗೆ ರಕ್ಷಣೆ ಇಲ್ವಾ ಎಂಬ ಅನುಮಾನ ಸೃಷ್ಟಿಯಾಗಿದ್ದು, ಶಿಕ್ಷಕ ಮತ್ತು ಆತನ ಗುಂಪು ದಲಿತ ಗ್ರಾಮ ಪಂಚಾಯಿತಿ ಸದಸ್ಯನಿಗೆ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ. ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೇಲ್ಜಾತಿಯ ಶಿಕ್ಷಕ ರಾಜಶೇಖರ್ ಮತ್ತು ಅವರ ಗುಂಪು ಸೇರಿ ದಲಿತನ ಮೇಲೆ ಹಲ್ಲೆ ನಡೆಸಿದ್ದಾರೆ.
ಸಮಾಜ ಸೇವಕ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಎದೆಗೆ ಬಲವಾದ ಏಟು ಬಿದ್ದ ಕಾರಣ ಮಂಜುನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ತಂಗುದಾಣ ನಿರ್ಮಾಣ ಮಾಡಲು ಮುಂದಾಗಿದನ್ನು ವಿರೋಧಿಸಿದ ಶಿಕ್ಷಕ ರಾಜಶೇಖರ್ ಹಾಗೂ ಗುಂಪು, ನಮ್ಮ ಮನೆ ಮುಂಭಾಗ ಸಾರ್ವಜನಿಕ ತಂಗುದಾನ ನಿರ್ಮಾಣ ಮಾಡಬೇಡ ಇಲ್ಲಿ ಕೆಳ ಜಾತಿ ಅವರೆಲ್ಲ ಬಂದು ಕೂರುತ್ತಾರೆ ಎಂದು ಮಂಜುನಾಥ್ ಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಶಿಕ್ಷಕ ರಾಜಶೇಖರ್ ಕೊರಟಗೆರೆ ತಾಲೂಕು ಕುರಂಕೋಟೆ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೃಹ ಸಚಿವರ ತವರಲ್ಲಿ ದಲಿತರಿಗೆ ರಕ್ಷಣೆ ಇಲ್ಲವೇ?: ಗೃಹ ಸಚಿವರ ಕ್ಷೇತ್ರದಲ್ಲೇ ಹಾಡಹಗಲು ದಲಿತ ಗ್ರಾ.ಪಂ. ಸದಸ್ಯನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ದಲಿತರ ರಕ್ಷಣೆಯ ಭರವಸೆ ನೀಡಿದ್ದ ಸರ್ಕಾರವೇ ಈಗ ಆಡಳಿತದಲ್ಲಿದೆ. ಇನ್ನೊಂದೆಡೆ ಗೃಹ ಸಚಿವರು ಕೂಡ ಒಬ್ಬರು ದಲಿತರೇ ಆಗಿದ್ದರೂ, ದಲಿತರಿಗೆ ರಾಜ್ಯದಲ್ಲಿ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ. ಇನ್ನೊಂದೆಡೆ ಇಲ್ಲಿನ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಸಾಮಾಜಿಕ ಸಮಾನತೆಯ ಬಗ್ಗೆ ಮಾತನಾಡುವ ಸರ್ಕಾರ ಹಾಗೂ ಗೃಹ ಸಚಿವರಿಗೆ ಈ ಅನ್ಯಾಯಗಳು ಕಾಣುತ್ತಿಲ್ಲವೇ ಎನ್ನುವ ಆಕ್ರೋಶ ವ್ಯಕ್ತವಾಗಿದೆ.


