ಕೊಳೆತ ಸ್ಥಿತಿಯಲ್ಲಿ ಹುಲಿಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ವಿಭಾಗ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತ ಹುಲಿಯು 4 ವರ್ಷದ ಪ್ರಾಯದ್ದಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಲಿಂಗ ಗುರುತಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಹುಲಿಯ ಸಾವಿನ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸುವ ಸಲುವಾಗಿ ಮೃತ ಹುಲಿಯ ಅಂಗಾಂಗಳನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಅರಣ್ಯ ಪ್ರದೇಶದ ಗಿಡಗಂಟಿಗಳ ಪೊದೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಹುಲಿಯು ವನ್ಯಜೀವಿಯ ಜೊತೆಗಿನ ಕಾದಾಟದಿಂದ ಸುಮಾರು 12ರಿಂದ 15 ದಿನಗಳ ಹಿಂದೆ ಸಾವನ್ನಪ್ಪಿರುವುದಾಗಿ ಇಲಾಖಾ ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇವುಗಳ ಬಗ್ಗೆ ಯಾವುದೇ ನಿಖರತೆ ದೊರೆಯದಿರುವುದರಿಂದ ಹುಲಿ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ, ಎನ್. ಬೇಗೂರು ವಲಯ ವಲಯ ಅರಣ್ಯಾಧಿಕಾರಿ ಮಂಜುನಾಥ ಡಿ. ಬಾಗೇವಾಡಿ, ಗುಂಡ್ರೆ ವಲಯದ ವಲಯ ಅರಣ್ಯಾಧಿಕಾರಿ ಅಮೃತೇಶ್ ಬಿ.ಬಿ., ಇಲಾಖಾ ಪಶು ವೈಧ್ಯಾಧಿಕಾರಿ ಡಾ. ವಾಸಿಂ ಮಿರ್ಜಾ ಹಾಗೂ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಾಮನುಸಾರ ಮೃತ ಹುಲಿಯನ್ನು ಕಟ್ಟಿಗೆ ಮೂಲಕ ಸುಡಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


