ತುಮಕೂರು: ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ಗುಬ್ಬಿ ಪಟ್ಟಣದ ಪೋಲೀಸ್ ಠಾಣೆ ಹಿಂಭಾಗದ ಹಂದಿಜೋಗರ ವಸತಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಮಳೆ ನೀರಿನಲ್ಲಿ ಜೀವನ ನಡೆಸುತ್ತಿರುವ ಹಂದಿಜೋಗಿಗಳನ್ನು ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮನವೊಲಿಸಿದರು.
ಮಳೆ ನೀರಿನಿಂದ ಆವೃತಗೊಂಡಿರುವ ಹಂದಿಜೋಗರ ಗುಡಿಸಲುಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಸುರಕ್ಷಿತ ಸ್ಥಳಕ್ಕೆ ತಕ್ಷಣ ಸ್ಥಳಾಂತರವಾಗಬೇಕು ಎಂದು ನಿವಾಸಿಗಳಿಗೆ ಮನವಿ ಮಾಡಿದರು. ಸತತ ಮಳೆಯಿಂದ ಹಂದಿಜೋಗಿಗಳು ಸಂಕಷ್ಟದಲ್ಲಿದ್ದು, ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.
ತಹಶೀಲ್ದಾರ್ ಬಿ. ಆರತಿ ಅವರು ಸಾತೇನಹಳ್ಳಿ ಪ್ರದೇಶದಲ್ಲಿ 35 ಹಂದಿಜೋಗಿ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಣೆಯಾಗಿದ್ದು, ಉಳಿದ ಕುಟುಂಬಗಳಿಗೆ ದಾಖಲೆಗಳ ಸಲ್ಲಿಕೆಯನ್ನು ಮುಗಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು.
ನಂತರ ಸಾತೇನಹಳ್ಳಿಯ ಸ್ಥಳ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು, ಸ್ಥಳೀಯ ಆಡಳಿತವನ್ನು ಕುಡಿಯುವ ನೀರು, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗೂ ಅವರು ಅನಿರೀಕ್ಷಿತ ಭೇಟಿ ನೀಡಿ, ಮಹಿಳಾ ಒಳರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಔಷಧಿ ವಿತರಣಾ ವಿಭಾಗಗಳನ್ನು ಪರಿಶೀಲನೆ ಮಾಡಿದರು. ರೋಗಿಗಳ ಆರೋಗ್ಯ ಕುರಿತು ವಿಚಾರಿಸಿದರು.
ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಹಂದಿ ಜೋಗಿ ಸಮುದಾಯ ಮತ್ತು ಬುಡಕಟ್ಟು ಜನಾಂಗದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ನಡೆಸುತ್ತಿರುವ ಹೋರಾಟವು ಅತ್ಯಂತ ಶ್ಲಾಘನೀಯವಾಗಿದೆ. ಉಪ ಲೋಕಾಯುಕ್ತರು ಈ ವಿಷಯದಲ್ಲಿ ಸ್ಪಂದಿಸಿದ್ದು, ಸರಕಾರದಿಂದ ನೀಡಲಾದ ಸ್ಥಳಾಂತರ ಹಾಗೂ ಪರಿಹಾರ ಯೋಜನೆಗಳನ್ನು ಮುಂದಿನ ಹಂತಗಳಲ್ಲಿ ಜಾರಿಗೊಳಿಸಲು ಸೂಚಿಸಿರುವುದು ಸಮುದಾಯದ ಸಬಲೀಕರಣಕ್ಕೆ ಒಳ್ಳೆಯ ಬೆಳವಣಿಗೆ.
ಈ ಹೋರಾಟವು ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಉತ್ತಮ ಜೀವನಮಟ್ಟವನ್ನು ಒದಗಿಸಲು ಸಾಧ್ಯವಾಗುತ್ತದೆ, ಮತ್ತು ಇವರಿಗೆ ಗೌರವಪೂರ್ಣ ಹಾಗೂ ಸಮಾನ ಹಕ್ಕುಗಳನ್ನು ವಹಿಸುವ ಉದ್ದೇಶದಿಂದ ಒಳ್ಳೆಯ ಪರ್ಯಾಯಗಳನ್ನು ಕಂಡುಹಿಡಿಯಲು ಪ್ರೇರಣೆ ನೀಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q