ತುಮಕೂರು: ದೇಶದ ವಿದ್ಯಾವಂತರಿಗೂ ಕಾನೂನಿನ ಅರಿವಿಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡಿದವರನ್ನು ಗಲ್ಲಿಗೇರಿಸುವಂತಹ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿದೆ. ಜತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ. ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಲೋಕ ಅದಾಲತ್ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಜಿಲ್ಲೆ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಇದೇ ವೇಳೆ ಅವರು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿ.ಪಂ. ಸಿಇಒ ಕೆ.ವಿದ್ಯಾಕುಮಾರಿ, ಎಸ್ ಪಿ ಆರ್.ಕೆ.ಶಹಾಪೂರವಾಡ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700