ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ಕುರಂಕೋಟೆ ಗ್ರಾಮದಲ್ಲಿ ಸಂಸ್ಥೆಯ 798ನೇ ಕೆರೆ ಅಭಿವೃದ್ಧಿ ಕಾರ್ಯ ನಡೆಸಿ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟನೆಯನ್ನ ನೆರವೇರಿಸಿ ತಮ್ಮ ಅಮೃತಾಸ್ಥದಿಂದ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿಗೊಂಡ ಕೆರೆಯನ್ನು ಹಸ್ತಾಂತರ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುರಂಕೋಟೆ ಗ್ರಾಮ ಪಂಚಾಯತಿಯ ಅಧ್ಯಕ್ಷೆ ತಿಮ್ಮಕ್ಕ ವಹಿಸಿಕೊಂಡಿದ್ದರು.
ಕುರಂಕೋಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ (ದೊಡ್ಡಕಾಯಪ್ಪ) ದೇವಸ್ಥಾನದ ಬಳಿ ಇರುವ ಗುಂಡು ತೋಪಿನಲ್ಲಿರುವ ಕೆರೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಎಂಬ ಯೋಜನೆಯಡಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಕೆರೆ ಅಭಿವೃದ್ಧಿ ಪೂರ್ಣಗೊಂಡ ನಂತರ ಕೆರೆ ಮುಂಭಾಗ ನಾಮಫಲಕ ಅನಾವರಣ ಮಾಡಲಾಗಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ಪ್ರಗತಿ ಹಾಗೂ ಬದಲಾವಣೆ ಸಾಧ್ಯವಾಗುತ್ತಿದೆ. ಕೆರೆಗಳ ಮಣ್ಣನ್ನು ಹೂಳೆತ್ತುವ ಮೂಲಕ ಅಂತರ್ಜಲವನ್ನು ಅಭಿವೃದ್ಧಿ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡಿ ನಮ್ಮ ಪೂರ್ವಜರು ನಮಗೆ ನೀಡಿದ್ದನ್ನು ಮರಳಿ ನಮ್ಮ ಮುಂದಿನ ಪೀಳಿಗೆಗೆ ನಾವು ರಕ್ಷಣೆ ಮಾಡಿ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ..
— ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜೀ. ಶ್ರೀ ಕ್ಷೇತ್ರ ಸಿದ್ದರಬೆಟ್ಟ.
ಅಭಿವೃದ್ಧಿಗೊಂಡ ಕೆರೆಯ ಮುಂದಿನ ಜವಾಬ್ದಾರಿಯನ್ನು ಕುರಂಕೋಟೆ ಗ್ರಾಮ ಪಂಚಾಯತಿ ಕ್ರಮಬದ್ದವಾಗಿ ನಿರ್ವಹಿಸಲಿದೆ. ಕೊರಟಗೆರೆ ತಾಲೂಕಿನಲ್ಲಿ ಇದುವರೆಗೂ 06 ಕೆರೆಗಳು ಸಮಗ್ರವಾಗಿ ಅಭಿವೃದ್ಧಿಗೊಂಡಿವೆ. ರಾಜ್ಯದಲ್ಲಿ 798 ನೇ ಕೆರೆ ಕಾಮಗಾರಿ ಮುಗಿಸಿ ಕೆರೆ ಸಮಿತಿಯವರಿಗೆ ಹಸ್ತಾಂತರಿಸಲಾಗಿದೆ. ಕ್ಷೇತ್ರದ ವತಿಯಿಂದ ಕಾಮಗಾರಿಗೆ 2.80 ಲಕ್ಷ ಅನುದಾನ ಬಳಕೆಯಾಗಿದ್ದು, ಈ ಭಾಗದ ರೈತರು ಕೆರೆಯ ಫಲವತ್ತಾದ ಮಣ್ಣನ್ನು ತಮ್ಮ ಜಮೀನುಗಳಿಗೆ ಸ್ವಂತ ಖರ್ಚಿನಲ್ಲಿ ಸಾಗಾಟ ಮಾಡಿ ಕೃಷಿಗೆ ಬಳಕೆ ಮಾಡಿರುತ್ತಾರೆ. ಅಷ್ಟೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 06 ರಾಷ್ಟ್ರೀಯ ಬ್ಯಾಂಕುಗಳ ಬಿ.ಸಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅತಿ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಶೇ.14 ಕಡಿತ ಬಡ್ಡಿದರದಲ್ಲಿ ಸಂಘಗಳಿಗೆ ಹಣಕಾಸಿನ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ಮಾಶಾಸನ ವಿತರಣೆ, ಆರ್ಥಿಕವಾಗಿ ಕಷ್ಟದಲ್ಲಿರುವ ಸದಸ್ಯರನ್ನು ಗುರುತಿಸಿ ಅವರಿಗೆ ವಾತ್ಸಲ್ಯ ಮನೆ ರಚನೆ, ಜನಮಂಗಳ ಕಾರ್ಯಕ್ರಮ ದಲ್ಲಿ ವೀಲ್ ಚೇರ್ ಇತ್ಯಾದಿ ಸಲಕರಣೆ ನೀಡುವುದು, ಹಾಲಿನ ಡೈರಿ ಕಟ್ಟಡ ರಚನೆಗೆ ಅನುಧಾನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ವಿತರಣೆ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಸುಜ್ಞಾನನಿಧಿ ಶಿಷ್ಯವೇತನ ನೀಡುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಗದೀಶ್ ಜಿಲ್ಲಾ ಜನಜಾಗೃತಿ ಸದಸ್ಯರು, ಅವರು ಮಾತನಾಡಿ, ಕೆರೆ ಹೂಳೆತ್ತುವುದರಿಂದ ಗ್ರಾಮದ ರೈತರಿಗೆ ಅನುಕೂಲವಾಗಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಅಭಿನಂದನೆ ತಿಳಿಸಿದರಲ್ಲದೇ, ಪೂಜ್ಯರ ಇಂತಹ ಕಾರ್ಯಗಳನ್ನು ಸಹಿಸಲಾಗದ ಕೆಲವು ಕಿಡಿಗೇಡಿಗಳು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದು ಇದನ್ನು ತಾವು ಖಂಡಿಸುತ್ತಿದ್ದು ಸರ್ವಧರ್ಮಗಳ ಸಮನ್ವಯ ಕೇಂದ್ರ ಧರ್ಮಸ್ಥಳ ಆಗಿದೆ..
ದೇವಸ್ಥಾನಕ್ಕೆ ಬರುವ ಆದಾಯವನ್ನು ಪೂಜ್ಯರು ರಾಜ್ಯದ ಬಡತನ ನಿರ್ಮೂಲನೆ, ಶಿಕ್ಷಣ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ. ಪೂಜ್ಯರ ಸಮಾಜ ಸೇವೆ ಕಾರ್ಯಗಳು ಪ್ರಶ್ನಾತೀತ ಆಗಿದ್ದು ನಾವು ಅವರ ಜೊತೆಗೆ ಇದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕೆರೆ ಪುನಶ್ಚೇತನದಿಂದ ಊರಿನ 100 ರಿಂದ 150 ರೈತ ಕುಟುಂಬಗಳಿಗೆ ಅನುಕೂಲವಾಗಿದ್ದು, ರೈತರ ಕೃಷಿ ಭೂಮಿಗೆ ಅನುಕೂಲವಾಗಿದೆ ಎಂದು ತಿಳಿಸಿ ಗ್ರಾಮಸ್ಥರಿಗೆ ಕೆರೆಯನ್ನು ಮಲಿನಗೊಳಿಸದೆ ಸ್ವಚ್ಛತೆಯಿಂದ ಇಟ್ಟುಕೊಳ್ಳಲು ವಿನಂತಿಸಿದರು.
ಈ ಸಂದರ್ಭದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ಶ್ರೀ ಸಿದ್ದರಾಜು, ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜು, ಯೋಜನೆಯ ಯೋಜನಾಧಿಕಾರಿ ಅನಿತಾ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಮ್ಮಕ್ಕ ಹಾಗೂ ಸದಸ್ಯರು, ಪಾಂಡುರಂಗಯ್ಯ ದೇವಸ್ಥಾನದ ಕಾರ್ಯದರ್ಶಿಗಳು, ದೊಡ್ಡ ನರಸಪ್ಪ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಮತಾ, ಜ್ಯೋತಿ ಹಾಗೂ ಊರಿನ ಮುಖಂಡರು, ರೈತರು, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನ ಕೃಷಿ ಮೇಲ್ವಿಚಾರಕರಾದ ಮಹೇಂದ್ರಪ್ಪ ಮಾಡಿದರು, ಶಿವಕುಮಾರ ವಲಯ ಮೇಲ್ವಿಚಾರಕರು ವಂದಿಸಿದರು. ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4