ಧಾರವಾಡ: ಜಿಲ್ಲೆಯ ಎಲ್ಲ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಅವರಿಗೆ ಅಗತ್ಯವಿರುವ ಉಪಕರಣ ಹಾಗೂ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ವಿಶೇಷ ಚೇತನರನ್ನು ಸಂರಕ್ಷಿಸುತ್ತಿರುವ ಕುಟುಂಬಗಳಿಗೂ ಸರ್ಕಾರದ ನಿಯಮಾನುಸಾರ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಇಂದು (ಫೆ. 27) ಬೆಳಿಗ್ಗೆ ಶಿಕ್ಷಕೀಯರ ಸರ್ಕಾರಿ ತರಬೇತಿ ಕಾಲೇಜು (ಟಿಸಿಡಬ್ಲ್ಯೂ) ಸಭಾಂಗಣದಲ್ಲಿ ಜಿಲ್ಲಾ ಅಂಗವೀಕಲರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಂತೋಷ ಲಾಡ್ ಪೌಂಡೇಶನ್ ಮತ್ತು ಜನಮುಖಿ ಸೇವಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶೇಷ ಚೇತನರು ಹಾಗೂ ಅವರ ಕುಟುಂಬದವರೊಂದಿಗೆ ಸಂವಾದ ಮತ್ತು ಸಂತೋಷ ಲಾಡ್ ಪೌಂಡೇಶನ್ ನೀಡಿರುವ ವಿಕಲಚೇತನರ ಸಾಧನಗಳನ್ನು ವಿತರಿಸಿ ಮಾತನಾಡಿದರು.
ವಿಕಲಚೇತನರನ್ನು ವಿಶೇಷ ಕಾಳಜಿ ಮತ್ತು ಹೆಮ್ಮೆಯಿಂದ ಸಂರಕ್ಷಿಸಬೇಕು. ಅವರ ಬಗ್ಗೆ ಬರೀ ಕರುಣೆ ತೊರದೆ, ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆಗಳು, ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕ್ರಮವಹಿಸಬೇಕೆಂದು ಅವರು ಹೇಳಿದರು.
ಸಂತೋಷ ಲಾಡ್ ಪೌಂಡೇಶನ್ ವತಿಯಿಂದ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಚಿವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅನೇಕ ವಿಕಲಚೇತನ ಮಕ್ಕಳಿಗೆ ವ್ಹಿಲ್ ಚೇರ್, ಆಟಿಕೆ ಸಾಮಾನು, ಹಣ್ಣು ಹಾಗೂ ಧಾನ್ಯದ ಕಿಟ್ ಮತ್ತು ವಿಕಲಚೇತನ ಮಗುವಿಗೆ ಆರ್ಥಿಕ ಸಹಾಯ ನೀಡಲಾಗಿದೆ. ವಿಕಲಚೇತನ ಹಾಗೂ ದಿವ್ಯಾಂಗ ಮಕ್ಕಳ ಯೋಗಕ್ಷೇಮ ಹಾಗೂ ಅವರ ಆರೋಗ್ಯ ಮತ್ತು ಸಂರಕ್ಷಣೆಗೆ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೊಡಿಸಬೇಕು. ಇದರಿಂದ ವಿಕಲಚೇತನರಲ್ಲಿಯೂ ಬದುಕಿನ ಆತ್ಮವಿಶ್ವಾಸ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ವಿಶೇಷ ಕಾಳಜಿ ಮತ್ತು ಆತ್ಮವಿಶ್ವಾಸದ ಅಗತ್ಯವಿರುವ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳಿಗೆ ಸರ್ಕಾರಕ್ಕಿಂತ ಸಮಾಜದ ಹಾಗೂ ಸಮುದಾಯದ ಬೆಂಬಲ ಅಗತ್ಯವಿದೆ. ವಿಶೇಷ ಚೇತನರಲ್ಲಿ ಸಾಮಾನ್ಯಗಿಂತ ವಿಶೇಷವಾದ ಬುದ್ಧಿವಂತಿಕೆ ಹಾಗೂ ಜ್ಞಾನ ಇರುತ್ತದೆ. ಇದನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಇಲಾಖೆಗಳಿಂದ ಸಮಾಜಮುಖಿ ಕಾರ್ಯ ನೆರವೇರುತ್ತಿದೆ. ಜಿಲ್ಲಾ ಪಂಚಾಯತ್ಯಿಂದ ಹಾಗೂ ಗ್ರಾಮ ಪಂಚಾಯತಿಗಳಿಂದ ವಿಕಲಚೇತನರ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳನ್ನು ನೀಡಲಾಗುತ್ತಿದೆ ಎಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಧಾರವಾಡ ಗ್ರಾಮೀಣ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಡಿಡಿಪಿಐ ಕಚೇರಿಯ ಡಿವೈಪಿಸಿ ಅಧಿಕಾರಿ ಎಸ್.ಎಮ್.ಹುಡೇದಮನಿ, ಜನಮುಖಿ ಸೇವಾ ಸಂಸ್ಥೆಯ ಬಸವರಾಜ ಮ್ಯಾಗೇರಿ, ದೈಹಿಕ ಶಿಕ್ಷಕ ರವಿಕುಮಾರ ಬಾರಾಟಕೆ ಹಾಗೂ ಸಂತೋಷ ಲಾಡ್ ಪೌಂಡೇಶನ್ದ ಡಾ. ಜೆ.ಸಂದೀಪ, ಸಚಿವರ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ ಸೇರಿದಂತೆ ಇತರರು ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಟ್ಟು ಹಬ್ಬದ ವಿಶೇಷತೆ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ ಲಾಡ್ ಅವರ 51 ನೇ ಹುಟ್ಟು ಹಬ್ಬವನ್ನು ವಿವಿದ ಇಲಾಖೆಗಳ ಹಾಗೂ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಸಂತೋಷ ಲಾಡ್ ಫೌಂಡೇಶನ್ದಿಂದ ಇಂದು ವಿಶೇಷವಾಗಿ ಜಿಲ್ಲೆಯಲ್ಲಿ ಆಚರಿಸಲಾಯಿತು.
ಧಾರವಾಡದಲ್ಲಿನ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ, ಹುಬ್ಬಳ್ಳಿಯಲ್ಲಿನ ನಿರಾಶ್ರಿತರ ಕಲ್ಯಾಣ ಕೇಂದ್ರ ಮತ್ತು ಕಲಘಟಗಿ ಪಟ್ಟಣದಲ್ಲಿ ವಿಶೇಷ ಚೇತನರಿಗೆ ಹಾಗೂ ನಿರಾಶ್ರಿತರಿಗೆ 20 ವ್ಹೀಲ್ ಚೇರ್, 100 ಪಿಜಿಯೋಥೆರಪಿ ಬಾಲ್, 50 ತೂಕದ ಸಾಧನ ಸೇರಿದಂತೆ ಸುಮಾರು 10 ಲಕ್ಷ ಮೊತ್ತದ ಸಾಧನಗಳನ್ನು ಧಾರವಾಡ ಜಿಲ್ಲೆಯಲ್ಲಿ ವಿತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


