ಹಾಸನ: 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಶ್ವಾನವೊಂದು ತನ್ನ ಮಾಲಿಕನ ಮಕ್ಕಳ ಪ್ರಾಣ ಉಳಿಸಿ, ತನ್ನ ಪ್ರಾಣ ಬಿಟ್ಟ ಘಟನೆ ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ನಡೆದಿದೆ.
ಶಮಂತ್ ಎನ್ನುವವರ ತೋಟದಲ್ಲಿ ಪಿಟ್ ಬುಲ್ ಹಾಗೂ ಡಾಬರ್‌ಮನ್ ತಳಿಯ ನಾಯಿಗಳನ್ನು ಸಾಕಿದ್ದರು. ಪಿಟ್ ಬುಲ್ ಶ್ವಾನಕ್ಕೆ ಶಮಂತ್ ಅವರು ಭೀಮಾ ಎಂದು ಹೆಸರಿಟ್ಟಿದ್ದರು.
ತೋಟದಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಳಿಂಗ ಸರ್ಪವೊಂದು ಬಂದಿದೆ. ಈ ವೇಳೆ ಹೊರಗಡೆ ಮಕ್ಕಳು ಆಟವಾಡುತ್ತಿದ್ದು, ಕಾಳಿಂಗ ಸರ್ಪ ತೆಂಗಿನ ಗರಿಗಳ ಕೆಳಗೆ ಹೋಗಿದೆ. ಇದನ್ನು ಕಂಡ ನಾಯಿಗಳು ತೆಂಗಿನ ಗರಿಗಳ ಅಡಿಯಲ್ಲಿದ್ದ ಸರ್ಪವನ್ನು ಎಳೆದ ತಂದು ಸೆಣಸಾಡಲು ಶುರು ಮಾಡಿವೆ.
ಈ ನಡುವೆ ನಾಯಿಗಳ ಶಬ್ಧ ಕೇಳಿಸಿಕೊಂಡ ಶಮಂತ್ ಅವರು, ಹೊರಗೆ ಬಂದು ಕಾದಾಟವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಭೀಮಾ ತನ್ನ ಕಾದಾಟವನ್ನು ಮುಂದುವರೆಸಿದ್ದಾನೆ. ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಭೀಮಾ ನಾಯಿ, ಸುಮಾರು 12 ಅಡಿ ಸರ್ಪವನ್ನು ಮೂರು ತುಂಡುಗಳನ್ನಾಗಿ ಮಾಡಿ ಕೊಂದಿದೆ.
ಕಾದಾಟದ ವೇಳೆ ನಾಯಿಯ ಮುಖದ ಭಾಗಕ್ಕೆ ಕಾಳಿಂಗ ಸರ್ಪ ಹಲವು ಬಾರಿ ಕಚ್ಚಿದ್ದು, ವಿಷದ ಪರಿಣಾಮ ಶ್ವಾನ ಸಾವನ್ನಪ್ಪಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4