ತುಮಕೂರು: ನಗರದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸಬೇಕೆಂದು ಮಾಡಿದ ಪ್ರಸ್ತಾಪ ರೈತ ವಿರೋಧಿ ಹಾಗೂ ಜಿಲ್ಲೆಗಿರುವ ಐತಿಹಾಸಿಕ ಹೆಸರಿಗೆ ಮಸಿ ಬಳಿಯುವ ಕುತಂತ್ರವೆನಿಸಿದೆ ಎಂದು ಶಾಸಕ ಬಿ. ಸುರೇಶ್ ಗೌಡ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜಿಲ್ಲೆಯಿಂದ ರಾಜಕೀಯವಾಗಿ ಎಲ್ಲವನ್ನೂ ಗಳಿಸಿದ, ಅನೇಕ ಶಿಕ್ಷಣ ಸಂಸ್ಥೆಗಳ ಒಡೆತನ ಹೊಂದಿರುವ ಸಚಿವ ಪರಮೇಶ್ವರ್ ಅವರು ಇದ್ದಕ್ಕಿದ್ದಂತೆ ಈ ಆಗ್ರಹ ಮಾಡಿರುವುದರ ಹಿಂದೆ ಈ ಸರ್ಕಾರದಲ್ಲಿ ಇರುವ ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಕೈವಾಡ ಎದ್ದು ಕಾಣುತ್ತದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ರಾಮನಗರ ಜಿಲ್ಲೆಯಾಗಿದ್ದು ಅವರು ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಘೋಷಿಸುವಲ್ಲಿ ಅವರಿಗೆ ಇದ್ದ ರಿಯಲ್ ಎಸ್ಟೇಟ್ ಹಿತಾಸಕ್ತಿಯೇ ಕಾರಣವಾಗಿತ್ತು ಎಂದರು.
ತುಂಬೆ ಹೂವಿಗೆ ಪ್ರಸಿದ್ಧವಾಗಿದ್ದ ಕಲ್ಪತರು ನಾಡು ಎನಿಸಿರುವ ತುಮಕೂರು ಇಲ್ಲಿನ ಸಿದ್ದಗಂಗಾ ಮಠ, ಶಿವಗಂಗೆ ಬೆಟ್ಟ, ದೇವರಾಯನದುರ್ಗ, ಗೂಳೂರು ಮುಂತಾದ ಐತಿಹಾಸಿಕ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಕರೆದರೆ ಈ ಎಲ್ಲ ಚರಿತ್ರೆಯನ್ನು ಅಳಿಸಿ ಹೋಗುತ್ತದೆ, ಇತಿಹಾಸ ಮರೆಮಾಚಿದಂತಾಗುತ್ತದೆ. ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸುವ ಮೂಲಕ ತುಮಕೂರಿನ ಪರಿಸರದ ಕೃಷಿ ಕ್ಷೇತ್ರಕ್ಕೆ ತೀವ್ರ ಏಟು ಬೀಳುತ್ತದೆ ಎಂದು ಸುರೇಶ್ ಗೌಡರು ಪ್ರಶ್ನಿಸಿದರು.
ಪರಮೇಶ್ವರ್ ಅವರ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ಬರುವಂತೆ ತುಮಕೂರು ಹೆಸರು ಬದಲಿಸಲು ನಮ್ಮ ತೀವ್ರ ವಿರೋಧವಿದೆ. ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತುಮಕೂರು ರಹದಾರಿಯಾಗಬಾರದು. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಕೈ ಹಾಕಬಾರದು ಎಂದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರಿಗೆ ಅದರದ್ದೇ ಆದ ಅಸ್ತಿತ್ವವಿದೆ. ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡಿದರೆ ಇಲ್ಲಿನ ಇತಿಹಾಸ, ಪರಂಪರೆಗೆ ಪೆಟ್ಟು ಬೀಳುತ್ತದೆ. ಇಲ್ಲಿನ ಜನಜೀವನ ಶೈಲಿ ಹದಗೆಡುತ್ತದೆ. ತುಮಕೂರನ್ನು ರಿಯಲ್ ಎಸ್ಟೇಟ್‌ಗೆ ಬಲಿ ಕೊಡಬಾರದು ಎಂದು ಒತ್ತಾಯಿಸಿದರು.
ಸಚಿವ ಡಾ. ಪರಮೇಶ್ವರ್ ಅವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಜಿಲ್ಲೆಯ ಹೆಸರು ಉಳಿಸಿಕೊಂಡು ಅಭಿವೃದ್ಧಿ ಮಾಡಲಿ, ಜಿಲ್ಲೆಯ ಇತಿಹಾಸ, ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ಮಾಡುವುದು ಬೇಡ. ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಮುಖಂಡರಾದ ಪ್ರಭಾಕರ್, ನಗರ ಮಹಿಳಾ ಅಧ್ಯಕ್ಷೆ ವಸಂತಮ್ಮ, ಜಿ. ಜಗದೀಶ್, ಮರಿತಿಮ್ಮಯ್ಯ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


