ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಪಂ ವ್ಯಾಪ್ತಿಯ ವಾಡೇನ್ ಬಾಗ್ ತಾಂಡಕ್ಕೆ ಸೋಮವಾರ ಭೇಟಿ ನೀಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಭೀಮಸೇನರಾವ ಶಿಂಧೆ, ತಾಂಡದ ಜನರ ಸಮಸ್ಯೆ ಆಲಿಸಿದರು.
ತಾಂಡದಲ್ಲಿನ ಶಾಲೆ, ಅಂಗನವಾಡಿ, ರಸ್ತೆ ಸೇರಿದಂತೆ ವಿದ್ಯುತ್ ಸೌಕರ್ಯಗಳ ಕುರಿತು ತಾಂಡದ ನಿವಾಸಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಗ್ರಾಮದ ನಿವಾಸಿ ಬಾಬುರಾವ ಎನ್ನುವರು ಸಾಹೇಬ್ರೆ ನಮಗೆ ರಸ್ತೆ ಮಾಡಿಸಿಕೊಡಿ ಮಕ್ಕಳು ನಿತ್ಯ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದೆ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ತಾಂಡಕ್ಕೆ ಹೋಗಲು ರಸ್ತೆಯಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ತಾಂಡಕ್ಕೆ ಭೇಟಿ ಎಲ್ಲ ರಸ್ತೆ ಸೇರಿದಂತೆ ಎಲ್ಲ ಸಮಸ್ಯೆಗಳು ವಿಚಾರಿಸಲಾಗುತ್ತಿದೆ. ಸರಕಾರಕ್ಕೆ ಪತ್ರ ಬರೆಯುವ ಮೂಲಕ ತಾಂಡಕ್ಕೆ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈಗಾಗಲೇ ಕಾಂಗ್ರೆಸ್ ಸರಕಾರ ಕೆಕೆಆರ್ ಡಿಬಿಯಿಂದ ನಿರೀಕ್ಷೆಗೂ ಮೀರಿ ಹಣ ನೀಡಲಿದೆ. ಈ ಹಣ ತಾಲೂಕಿನ ಅಗತ್ಯವಿರುವ ಕಡೆಯಲ್ಲಿ ಕಾಮಗಾರಿ ಮಾಡಬೇಕಿದೆ. ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸರಕಾರ ಅನೇಕ ಯೋಜನೆಗಳು ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯೊಂದಿಗೆ ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಇದರ ಜತೆಗೆ ಕುಡಿಯುವ ನೀರಿಗಾಗಿ, ರಸ್ತೆಗಾಗಿ ಅನುದಾನ ಹರಿದು ಬರುತ್ತಿದೆ. ಇದರ ನಡುವೆ ವಾಡೇನ್ ಬಾಗ್ ತಾಂಡದ ಸಂಪರ್ಕಕ್ಕೆ ರಸ್ತೆ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ರಸ್ತೆಗೆ ನಿರ್ಮಾಣಕ್ಕೆ ನಾವುಗಳು ಭೂಮಿ ನೀಡಿದ್ದೇವೆ. ಪರಿಹಾರ ದೊರಕಿಸಿಕೊಡುವಂತೆ ರೈತರಾದ ಗಣಪತಿ ಬಸಟೆಪ್ಪ, ರಾಮ ಸೋರಳ್ಳಿ, ಶಿವರಾಜ ಶಂಕರ, ರಮೇಶ ಪಾಟೀಲ್ ಮನವಿ ಮಾಡಿಕೊಂಡರು.
ಈ ವೇಳೆ ತಾಂಡದ ನಿವಾಸಿ ಬಾಬುರಾವ, ಪಿಆರ್ ಇ ಎಇಇ ವೆಂಕಟ ಶಿಂಧೆ, ಜೆಇ ಶಿವಕುಮಾರ ಪುರಾಣಿಕ ಸೇರಿದಂತೆ ತಾಂಡದ ನಿವಾಸಿಗಳು ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


