ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ, ಅವರು ಇಡೀ ವಿಶ್ವಕ್ಕೆ ಮಾರ್ಗದರ್ಶಕರು ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರರಾದ ಡಾ. ಅಶ್ವಿನಿ ಕೆ.ಪಿ. ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಅದು ಯಾರ ಕೈಯಲ್ಲಿದೆ ಎನ್ನುವುದು ಮುಖ್ಯ. ಕೆಟ್ಟವರ ಕೈಯಲ್ಲಿ ಒಳ್ಳೆಯ ಸಂವಿಧಾನವೂ ಕೆಟ್ಟದಾಗಿ ಬಳಕೆಯಾಗಬಹುದು, ಅದೇ ಒಳ್ಳೆಯವರ ಕೈಯಲ್ಲಿ ಕೆಟ್ಟ ಸಂವಿಧಾನವೂ ಉತ್ತಮ ಫಲ ನೀಡಬಲ್ಲದು ಎಂದರು.
ಮಿಸಲಾತಿ ಕೇವಲ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೀಮಿತವಾಗಿಲ್ಲ. ದೇಶದಲ್ಲಿ ಮಿಸಲಾತಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಲ್ಲಿದೆ. ಕನ್ನಡ ಮಾಧ್ಯಮ, ಹೈದರಾಬಾದ್–ಕರ್ನಾಟಕ, ಮಿಲಿಟರಿ ಮಿಸಲಾತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಎಲ್ಲರಿಗೂ ಅವಕಾಶಗಳಿವೆ. ವಿದ್ಯಾರ್ಥಿಗಳು ಈ ಬಗ್ಗೆ ಸರಿಯಾದ ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದರು.
ಸಹಪ್ರಾಧ್ಯಾಪಕ ಪ್ರೊ.ರಾಜೇಂದ್ರ ಬಾಬು ಸಮ್ಮೇಳನದ ವರದಿ ಮಂಡಿಸಿದರು. ತುಮಕೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಘವೇಂದ್ರ ಕೆ.ಬಿ., ಕುಣಿಗಲ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ನರಸಿಂಹ ಮೂರ್ತಿ ಟಿ.ಎನ್. ಹಾಗೂ ವಿದ್ಯಾರ್ಥಿನಿ ದಿವ್ಯ ಕಾರ್ಯಕ್ರಮದ ಕುರಿತು ಅಭಿಪ್ರಾಯವನ್ನು ಹಂಚಿಕೊಂಡರು.
ಮಹಾರಾಷ್ಟ್ರದ ನಾಂದೇಡ್ ನ ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯದ ಪ್ರೊ. ದಿಲೀಪ್ ಚವ್ಹಾಣ್, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರೊ. ಅಶೋಕ್ ಡಿಸೋಜ ವಿಚಾರ ಮಂಡಿಸಿದರು. ತುಮಕೂರು ವಿವಿ ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಪರಮಶಿವಯ್ಯ, ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಮುನಿರಾಜು ಎಂ. ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.
ತುಮಕೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಕೇಶವ ಸ್ವಾಗತಿಸಿದರು. ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ದ್ವಾರಕನಾಥ್ ವಿ., ವಂದಿಸಿದರು.
ಅಂಬೇಡ್ಕರ್ ಅವರನ್ನು ಕೇವಲ ಭಜಿಸುವ ಮತ್ತು ಭಂಜಿಸುವ ಎರಡು ವರ್ಗಗಳು ಸೃಷ್ಟಿಯಾಗಿವೆ. ಸಂವಿಧಾನದ ಆಶಯಗಳನ್ನು ಹಂತ ಹಂತವಾಗಿ ನಾಶಪಡಿಸುವ ಕೆಲಸ ನಡೆಯುತ್ತಿದ್ದು, ಬಾಬಾ ಸಾಹೇಬರ ನೈಜ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಕಾಲ ಬಂದಿದೆ.
– ಪ್ರೊ.ಮೋಹನ್ ಹೆಚ್.ಎಸ್., ಪರೀಕ್ಷಾಂಗ ಕುಲಸಚಿವ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


