ತುಮಕೂರು: ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಯ 73 ಗ್ರಾಮ ಪಂಚಾಯಿತಿಗಳ 109 ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನಾಗರಿಕರಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿ ಕೆಲವು ಗ್ರಾಮಗಳಿಗೆ ಖಾಸಗಿ ಟ್ಯಾಂಕರ್‍ಗಳು, ಬೋರ್‍ವೆಲ್‍ಗಳು ಹಾಗೂ ಪರ್ಯಾಯ ವ್ಯವಸ್ಥೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜೂನ್ 2026ರವರೆಗೆ ಎದುರಾಗಬಹುದಾದ ಸಮಸ್ಯೆಯನ್ನು ಮನಗಂಡು, 141 ಗ್ರಾಮ ಪಂಚಾಯಿತಿಗಳ 194 ಗ್ರಾಮಗಳಿಗೆ 578.90 ಲಕ್ಷ ರೂ. ವೆಚ್ಚದಲ್ಲಿ ತುರ್ತು ಕಾರ್ಯಯೋಜನೆ ರೂಪಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿತ ನೀರು ಒಂದು ತಿಂಗಳಿಗೆ ಸಾಕಾಗಲಿದ್ದು, ಹೆಚ್ಚುವರಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಲಿಕಲ್ಲು ಮಳೆ: 840 ರೈತರ ಬೆಳೆ ಹಾನಿ
ಮಳೆ ಹಾಗೂ ಆಲಿಕಲ್ಲು ಮಳೆಯಿಂದ ಶಿರಾ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಕೆಲವು ಕಡೆ ಬೆಳೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಶಿರಾ ತಾಲೂಕಿನ ತಡಕಲೂರು ಗ್ರಾಮದಲ್ಲಿ ಇಬ್ಬರು ರೈತರ 2.00 ಹೆಕ್ಟೇರ್ ಜೋಳದ ಬೆಳೆ ಹಾನಿಗೊಳಗಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಹುಲಿಕುಂಟೆ ಹೋಬಳಿಯ ತಡಕಲೂರು ಮತ್ತು ಹಂದಿಕುಂಟೆ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 840 ರೈತರ 538.27 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ವರದಿಯಾಗಿದೆ. ಇದರಲ್ಲಿ ದಾಳಿಂಬೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ರೇಷ್ಮೆ ಬೆಳೆಗಳಲ್ಲಿ 23 ರೈತರ 18.51 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಸಂಭವಿಸಿದ್ದು, ಎಲ್ಲಾ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ ಎಂದರು.
ರಾಗಿ ಖರೀದಿ:
ರಾಗಿ ಖರೀದಿ ಕುರಿತು, 2025-26ನೇ ಸಾಲಿನಲ್ಲಿ 11 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಕ್ವಿಂಟಾಲ್‍ಗೆ 4,886 ರೂ. ಬೆಲೆ ನಿಗದಿಯಾಗಿದೆ. ಇದುವರೆಗೆ 33,043 ರೈತರಿಂದ 7,85,889 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದ್ದು, ಉಳಿದ ರೈತರಿಂದ ಖರೀದಿ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
- ನೀರಿನ ಗುಣಮಟ್ಟ: ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗಾಗಿ ವ್ಯಾಪಕ ಪರೀಕ್ಷೆಗಳನ್ನು ನಡೆಸಲಾಗಿದೆ. ಸಾವಿರಾರು ಮಾದರಿಗಳಲ್ಲಿ ಕಲುಷಿತ ಅಂಶಗಳು ಪತ್ತೆಯಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
- ಪಶುಪಾಲನೆ: ಜಿಲ್ಲೆಯಲ್ಲಿ ಪ್ರಸ್ತುತ 36 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ ಎಂದು ಪಶುಪಾಲನಾ ಇಲಾಖೆಯವರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


