ತೋಟಗಾರಿಕೆ ಇಲಾಖೆಯಿಂದ ಮೇ 13ರಿಂದ ಮೇ 21ರ ವರೆಗೆ ಕೊಪ್ಪಳ ನಗರದ ಎಲ್.ಐ.ಸಿ ಆಫೀಸ್ ಹತ್ತಿರವಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ.ಉಕ್ಕುಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆವತಿಯಿಂದ 8ನೇ ವರ್ಷದ ಮಾವು ಮೇಳವನ್ನು ಮೇ 13 ರಿಂದ ಮೇ 21ರ ವರೆಗೆ ತೋಟಗಾರಿಕೆ ಇಲಾಖೆ (ಜಿಪಂ) ಕೊಪ್ಪಳ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 5000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆಯ ತಳಿಯಾಗಿದೆ ಹಾಗೂ ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ, ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.
ಈ ಮೇಳದಲ್ಲಿ ಕೇಸರ್, ಬೆನೆಶಾನ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಪುನಾಸ್ ಸೇರಿದಂತೆ 100 ಕ್ಕೂ ಅಧಿಕ ವಿವಿಧ ಮಾವಿನ ತಳಿಗಳನ್ನು ಹಾಗೂ ಪುನಾಸ್ ಮತ್ತು ಮಂಡಪ್ಪ ಉಪ್ಪಿನಕಾಯಿ ತಳಿಯ ಮಾವು ಹಾಗೂ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
ಜೊತೆಗೆ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದ ಮಾವಿನ ವಿವಿಧ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಈ ಮೇಳದಲ್ಲಿ ಉಪ್ಪಿನಕಾಯಿ ಮಾವನ್ನು ಸಹ ಮಾರಾಟ ಮಾಡಲಾಗುತ್ತಿದೆ ಹಾಗೂ ರೈತರೇ ತಯಾರಿಸಿದ ಉಪ್ಪಿನಕಾಯಿಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.
ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣು ಪ್ರದರ್ಶನ: ಈ ಮೇಳದಲ್ಲಿ ವಿಶೇಷವಾಗಿ ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣಾದ ಮೀಯಾ ಜಾಕಿ ಎಂಬ ಜಪಾನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾವಿನ ತಳಿಯ ಬೆಲೆಯು 1 ಕೆ.ಜಿ.ಗೆ ರೂ. 2.50 ಲಕ್ಷ ಬೆಲೆ ಬಾಳುತ್ತದೆ.
ಮೇಳದಲ್ಲಿ ಮಿಯಾ ಜಾಕಿ ಹಣ್ಣಿನ ಗಿಡಗಳನ್ನು ಬೆಳೆಯಲು ಆಸಕ್ತಿ ಇರುವ ರೈತರಿಗೆ ಗುಣಮಟ್ಟದ ಗಿಡಗಳ ಪೂರೈಕೆ ಕುರಿತು ಸಹ ಮಾಹಿತಿ ನೀಡಲಾಗುತ್ತಿದೆ. ಈ ಮೇಳದಲ್ಲಿ 12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ರೈತರು ನೇರವಾಗಿ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ ಹಾಗೂ ಮೇಳದಲ್ಲಿ ಸಾವಯವದಲ್ಲಿ ಬೆಳೆದ ಹಾಗೂ ದೃಢೀಕರಣದ ಪ್ರಮಾಣ ಪತ್ರ ಹೊಂದಿದ ರೈತರು ಭಾಗವಹಿಸಿದ್ದಾರೆ. ವಿವಿಧ ತಳಿಗೆ ಯೋಗ್ಯ ಬೆಲೆಯನ್ನು ಈ ಮೇಳದಲ್ಲಿ ನಿರ್ಧರಿಸಲಾಗಿದ್ದು, ಸಾರ್ವಜನಿಕರು ಮಾವು ಮೇಳದಲ್ಲಿ ಭಾಗವಹಿಸಿ ರೈತರ ಆದಾಯ ಹೆಚ್ಚಿಸಬೇಕು.
22 ಕ್ಕೂ ಹೆಚ್ಚಿನ ಸ್ಟಾಲ್ ಗಳ ವ್ಯವಸ್ಥೆ: ಈ ಮೇಳದಲ್ಲಿ ಭಾಗವಹಿಸಲು 55 ಕ್ಕೂ ಹೆಚ್ಚಿನ ರೈತರು ನೋಂದಾಯಿಸಿರುತ್ತಾರೆ. ರೈತರಿಗಾಗಿ ಉಚಿತವಾಗಿ 22 ಕ್ಕೂ ಹೆಚ್ಚಿನ ಸ್ಟಾಲ್ ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10 ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಲು ಸ್ಟಾಲ್ ಗಳ ವ್ಯವಸ್ಥೆ ಮಾಡಲಾಗಿದೆ.
ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಕೊಪ್ಪಳದ ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ, ಈ ಮೇಳದಲ್ಲಿ ನೇರವಾಗಿ ಭಾಗವಹಿಸದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಈ ಮೇಳದಲ್ಲಿ ಮಾವು ಬೆಳೆಯಲು ಆಸಕ್ತಿ ಹೊಂದಿದ ರೈತರಿಗೆ ಮಾವನ್ನು ಬೆಳೆಯುವ ಬಗ್ಗೆ ಹಾಗೂ ಮಾರುಕಟ್ಟೆ, ಗುಣಮಟ್ಟದ ಮಾವು ಮತ್ತು ಇಳುವರಿ ಹೇಗೆ ತೆಗೆಯಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ ಹಾಗೂ ಸಾವಯವ ಪದ್ದತಿಯಲ್ಲಿ ಮಾವು ಬೆಳೆಯುವ ಬಗ್ಗೆ ಹಾಗೂ ವಿವಿಧ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕುರಿತು ಮಾಹಿತಿಯನ್ನು ಸಹ ನೀಡಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA