ಬಿಬಿಎಂಪಿಯ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಇಬ್ಬರು ಸಿಬ್ಬಂದಿಯನ್ನು ಹಲಸೂರು ಗೇಟ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದವರನ್ನ ಖುದ್ದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಬಿಬಿಎಂಪಿ ಅಧಿಕಾರಿಗಳು ತಡರಾತ್ರಿ ದೂರು ನೀಡಿದ್ದರು. ಅದರ ಅನ್ವಯ ನಿರ್ಲಕ್ಷ್ಯತನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬಿಟುಮಿನ್ ಏಕಾಗ್ರತೆ ಹಾಗೂ ಶಕ್ತಿಯ ಮಟ್ಟವನ್ನ ಪರೀಕ್ಷಿಸುವಾಗ ಬೆಂಜಿನ್ ಬಳಕೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಅವಘಡಕ್ಕೆ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್) ತಂಡ ಸಹ ಪರಿಶೀಲನೆ ನಡೆಸಿದೆ. ವರದಿ ಬಂದ ನಂತರ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.


