ಬೈಲಹೊಂಗಲ: ಸಹಕಾರಿ ಸಂಘಗಳು ರೈತರನ್ನು ಆರ್ಥಿಕವಾಗಿ ಬೆಳವಣಿಗೆಗೆ ಹೊಂದಲು ಅತ್ಯಂತ ಮಹತ್ವವನ್ನು ಹೊಂದಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸವದತ್ತಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕಿ ರತ್ನಕ್ಕಾ ಮಾಮನಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಶತಮಾನದ ಅಂಚಿನಲ್ಲಿರುವ ಪ್ರಾಕೃಪಸ ಸಂಘದ ನೂತನ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹಾಗೂ ಪ್ರತಿಶತ 3ರಂತೆ ದೀರ್ಘಾವಧಿಯ ಸಾಲವನ್ನು ಡಿಸಿಸಿ ಬ್ಯಾಂಕ್ ಮುಖಾಂತರ ರೈತರಿಗೆ ವಿತರಿಸುತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಬೇಕು. ದಿ. ಆನಂದ ಮಾಮನಿಯವರು ತಾಲೂಕಿನ ಸಹಕಾರಿ ಸಂಘಗಳ ಬೆಳವಣಿಗೆಗ ಸಾಕಷ್ಟು ಮುತವರ್ಜಿವಹಿಸಿದ್ದರು. ಅವರಿಗೆ ನೀಡಿದ ಸಹಕಾರದಿಂದ ತಾಲೂಕಿನ ಸಂಘಗಳು ಆರ್ಥಿಕವಾಗಿ ಸದೃಡವಾಗುವದರೊಂದಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ ಎಂದರು.
ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ 1930ರಲ್ಲಿ ಸಾವಿರ ರೂಪಾಯಿ ಬಂಡವಾಳದಿಂದ ಗ್ರಾಮದ ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು 10ಕೋಟಿ ರೂಪಾಯಿ ವಹಿವಾಟ ನಡೆಸುವದರೊಂದಿಗೆ 14ನೂರು ರೈತ ಸದಸ್ಯರನ್ನು ಹೊಂದಿದೆ. 62 ಲಕ್ಷ ರೂಪಾಯಿಗಳಲ್ಲಿ ನೂತನ ಕೃಷಿ ಸೇವಾಕೇಂದ್ರ ಹಾಗೂ ಉಗ್ರಾಣ ಕಟ್ಟಡ ನಿರ್ಮಾಣವಾಗಿದ್ದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಸಂಘಕ್ಕೆ 2ಸಾವಿರ ಮೆಟ್ರಿಕ್ ಟನ್ ಗೋಡಾವನ ಸ್ವಂತ ಕಛೇರಿ ಹೊಂದಿದ್ದು ಸಂಘದ ಬೆಳವಣಿಗೆಗೆ ಕಾರಣಿ ಕರ್ತರಾದ ವೀರಪ್ಪ ಮಾಕಿ, ಬಸಪ್ಪ ಹುಂಬಿ, ಕರಡಿಗುದ್ದಿ, ದೇಮಪ್ಪ ಮತ್ತಿಕೊಪ್ಪ ಮುದಖಪ್ಪ ಮೂಗಬಸವ, ಗೊಡಚಯ್ಯ ಗಣಾಚಾರಿ ಹಾಗೂ ಗುರಸಿದ್ದಪ್ಪ ಚಳಕೊಪ್ಪ ಅವರ ಕಾರ್ಯವನ್ನು ಶ್ಲಾಘಿಸಿದರು.
ವಿರೂಪಾಕ್ಷ ಮಾಮನಿ ಹಾಗೂ ತಾಲೂಕಾ ನಿಯಂತ್ರಣಾಧಿಕಾರಿ ಸಿ.ಆರ್.ಪಾಟೀಲ ಮಾತನಾಡಿದರು. ಪಿಕೆಪಿಎಸ್ ಅಧ್ತಕ್ಷ ಸೋಮಲಿಂಗ ಚಳಕೊಪ್ಪ ಅಧ್ಯಕ್ಷತೆ ವಹಿಸಿದ್ದರು.


