ತುಮಕೂರು: ವಿದ್ಯೆಗೆ ಯಾವುದೇ ಜಾತಿಯ ಹಂಗಿಲ್ಲ. ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಿದರೆ ಜ್ಞಾನವಂತರಾಗಲು ಸಾಧ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ವಿದ್ಯೆಯು ಕೇವಲ ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ ಎಂದು ಹಿರಿಯ ದಲಿತ ಮುಖಂಡ ಹಬ್ಬತ್ತನಹಳ್ಳಿ ಶ್ರೀನಿವಾಸ್ ಅವರು ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಹಾದಿಯಲ್ಲಿ ಯಶಸ್ಸು ಸಾಧ್ಯ:
ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆದುಬಂದ ಹಾದಿಯು ನಮಗೆಲ್ಲ ಆದರ್ಶವಾಗಬೇಕು. ಅವರು ತೋರಿಸಿದ ಶಿಕ್ಷಣ, ಸ್ವಾಭಿಮಾನ ಮತ್ತು ಸಂಘಟನೆಯ ಮಾರ್ಗದಲ್ಲಿ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀನಿವಾಸ್ ಅವರು ಒತ್ತಿ ಹೇಳಿದರು.
ದಲಿತ ಪರ ಹೋರಾಟಕ್ಕೆ ಮೆರುಗು ನೀಡಿದ ಎಂ.ಸಿ. ರಾಜು:
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಎಂ. ರಾಮಯ್ಯ ಅವರು, ದಿವಂಗತ ಎಂ.ಸಿ. ರಾಜು ಅವರು ತುಮಕೂರು ಜಿಲ್ಲೆಯ ದಲಿತಪರ ಹೋರಾಟಕ್ಕೆ ಮೆರುಗು ನೀಡಿದವರು. ಅವರು ಬಾಬಾಸಾಹೇಬರ ಆಶಯಗಳನ್ನು ವಿದೇಶಕ್ಕೂ ವಿಸ್ತರಿಸಿದ್ದರು ಎಂದು ಸ್ಮರಿಸಿದರು.
ಮಕ್ಕಳಿಗೆ ವಿದ್ಯೆ ನೀಡಲು ಮುಖಂಡರಿಗೆ ಜಯಣ್ಣ ಕರೆ:
ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಯನುಡಿ ಜಯಣ್ಣ ಮಾತನಾಡಿ, ಬಾಬಾ ಸಾಹೇಬರ ವಿಚಾರಧಾರೆಗಳನ್ನು ಕಾಲಕಾಲಕ್ಕೆ ಸ್ಮರಿಸಬೇಕು. ವಿದ್ಯೆಗೆ ಒತ್ತು ನೀಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬ ದಲಿತ ಮುಖಂಡರು ತಮ್ಮ ಕುಟುಂಬದ ಮಕ್ಕಳ ಜೊತೆಗೆ ಸುತ್ತಮುತ್ತಲಿನ ದಲಿತ ಮಕ್ಕಳನ್ನು ಕೂಡ ವಿದ್ಯಾವಂತರನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ನುಡಿದರು.
ಅಸ್ಪೃಶ್ಯತೆ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು:
ಮುಖಂಡ ಹಂಚಿಹಳ್ಳಿ ರಾಮಸ್ವಾಮಿ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾದವರಿಗೆ ನ್ಯಾಯ ದೊರಕಿಸಿಕೊಡಲು ಪ್ರತಿಯೊಬ್ಬರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಮಹಿಳಾ ಮುಖಂಡರಾದ ಮಂಜುಳಾ ಅವರು, ಮಹಿಳೆಯರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಸ್ಪೃಶ್ಯತೆ ವಿರುದ್ಧ ದೃಢವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಸಮಾರಂಭಕ್ಕೂ ಮುನ್ನ ಕೆಸರುಮಡು ಗೋಪಾಲ್ ಅವರು ಬಾಬಾ ಸಾಹೇಬರ ಕ್ರಾಂತಿ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಟಿ.ಸಿ. ರಾಮಯ್ಯ, ಲವಕುಮಾರ್, ನರಸಿಂಹರಾಜು, ತಿಮ್ಮಲಾಪುರ ನರಸಿಂಹಮೂರ್ತಿ, ಸುಮಾ, ಶೇಖರ್, ಛಾಯಾ, ಶೋಭಾ, ರಾಜಶೇಖರ್ ನಂಜಯ್ಯ ಮುಂತಾದ ಮುಖಂಡರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


