ಸರಗೂರು / ಎಚ್.ಡಿ.ಕೋಟೆ: “ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರವಾಗಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಎಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸಿ. ಎನ್. ರಾಜು ತಿಳಿಸಿದರು.
ತಾಲೂಕಿನ ಮಂಟಿ ಹಾಡಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಎಚ್.ಡಿ.ಕೋಟೆ ಹಾಗೂ ಸರಗೂರು ಸಂಘಟನೆಯ ವತಿಯಿಂದ, ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಮಾವಳ್ಳಿ ಶಂಕರ್ ಅವರು ತಮ್ಮ ಜೀವನವನ್ನೇ ಶೋಷಿತರು, ದಲಿತರು ಹಾಗೂ ಬಡವರ ಹಕ್ಕುಗಳಿಗಾಗಿ ಸಮರ್ಪಿಸಿಕೊಂಡಿದ್ದಾರೆ. ಅವರ ಜನ್ಮದಿನವನ್ನು ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ವಿದ್ಯಾರ್ಥಿಗಳು ಬುದ್ಧರ ಶಾಂತಿ, ಬಸವಣ್ಣನವರ ಸಮಾನತೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು” ಎಂದು ಬಿಇಒ ರಾಜು ಶುಭ ಹಾರೈಸಿದರು.
ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಸಿದ್ದು ಹಾದನೂರು ಮಾತನಾಡಿ, “1970ರ ದಶಕದಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯು ನಾಡಿನ ಶೋಷಿತರ, ಬಡವರ ಶಿಕ್ಷಣ, ಭೂಮಿ, ವಸತಿ ಹಾಗೂ ಉದ್ಯೋಗದಂತಹ ಮೂಲಭೂತ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದೆ” ಎಂದರು.
ಮಾವಳ್ಳಿ ಶಂಕರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಚಳುವಳಿಯಲ್ಲಿ ತೊಡಗಿಸಿಕೊಂಡು, ಪ್ರೊ.ಬಿ.ಕೃಷ್ಣಪ್ಪ, ಡಾ.ಸಿದ್ದಲಿಂಗಯ್ಯ, ದೇವನೂರು ಮಹಾದೇವ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದಾರೆ. ‘ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಹೋರಾಟ’, ‘ಪಿಟಿಸಿಎಲ್ ಹೋರಾಟ’ ಹಾಗೂ “ಹೆಂಡ ಬೇಡ – ವಸತಿ ಶಾಲೆ ಬೇಕು” ಎಂಬ ಸಾಮಾಜಿಕ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಇಂದು ದಲಿತ ಹಾಗೂ ಸಾಂಸ್ಕೃತಿಕ ಚಳುವಳಿಗಳ ಜೀವಂತ ಜ್ವಾಲೆಯಾಗಿದ್ದಾರೆ ಎಂದು ಸ್ಮರಿಸಿದರು.
ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸರ್ಕಾರವು ಬಾಬು ಜಗಜೀವನ್ ರಾಮ್, ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕರಾದ ಚನ್ನಕೋಟೆ, ಬೋಗೇಶ್ವರ ಕಾಲೋನಿ ಕಾಳಪಾಜ್ಜಿ, ಮಟಕರೆ ಮಹೇಶ್, ಹೈರಿಗೆ ಕುಮಾರ್, ಅನೀಲ್, ಶಿವರಾಜು ಎಂ., ಸರಗೂರು ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಹಾದನೂರು ಚಂದ್ರ, ಮಣಿಕಂಠ, ಕೃಷ್ಣ ಕುರ್ಣೇಗಾಲ, ಶಿವರಾಜು, ಶಿವಕುಮಾರ್, ಚಲುವರಾಜು, ಮಹದೇವ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


