ತುಮಕೂರು: ಸಿರಿಧಾನ್ಯ ಕುರಿತು ಜನಾಂದೋಲನ ರೂಪದಲ್ಲಿ ಪ್ರಚಾರ ಕೈಗೊಂಡು ರಾಜ್ಯವನ್ನು ಸಿರಿಧಾನ್ಯಗಳಿಗೆ ಜಾಗತಿಕ ಕೇಂದ್ರವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಒನಕೆಯಲ್ಲಿ ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯೊಂದಿಗೆ ಹೇರಳವಾದ ಪೋಷಕಾಂಶಗಳನ್ನು ಹೊಂದಿವೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯವರ್ಧನೆಯಾಗುವುದಲ್ಲದೆ ರೋಗ ಮುಕ್ತರಾಗಿ ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು.
ತಾಯಂದಿರು ತಮ್ಮ ಮಕ್ಕಳಿಗೆ ಸಿರಿಧಾನ್ಯ ಪದಾರ್ಥಗಳ ಸೇವನೆಯ ಅಭ್ಯಾಸ ಮಾಡಿಸಬೇಕು. ನಿಧಾನವಾಗಿ ಜೀರ್ಣವಾಗಿ ದೇಹಕ್ಕೆ ಶಕ್ತಿವರ್ಧಕವಾಗಿ ಕೆಲಸ ಮಾಡುವ ಗುಣಧರ್ಮವನ್ನು ಹೊಂದಿರುವ ಸಿರಿಧಾನ್ಯಗಳನ್ನು ಜನರು ಹೆಚ್ಚಾಗಿ ಬಳಸಬೇಕು ಎಂದರಲ್ಲದೆ, ಜಿಲ್ಲೆಯು ಸಿರಿಧಾನ್ಯಗಳ ತವರೂರು ಎಂದೆನೆಸಿಕೊಂಡಿದೆ. ಜಿಲ್ಲೆಯ ಸುಮಾರು 1400 ಹೆಕ್ಟೇರ್ ಪ್ರದೇಶದಲ್ಲಿ ಸಾಮೆ, ನವಣೆ, ಕೊರಲೆ, ಹಾರಕ, ಸಜ್ಜೆಯಂತಹ ಸಿರಿಧಾನ್ಯಗಳನ್ನು ಬೆಳೆದು ಅಂದಾಜು 4.95 ಲಕ್ಷ ಟನ್ ಸಿರಿಧಾನ್ಯವನ್ನು ಉತ್ಪಾದಿಸಲಾಗುತ್ತಿದೆ. ಸಿರಿಧಾನ್ಯ ಬೆಳೆಯ ವಿಸ್ತೀರ್ಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಮಾರ್ಗದರ್ಶನದೊಂದಿಗೆ ಉತ್ತೇಜನ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾವುದೇ ರಾಷ್ಟçದ ಅಭಿವೃದ್ಧಿಗೆ ಕೃಷಿಕರೇ ಮೂಲಾಧಾರ. ಭಾರತವು ಅಭಿವೃದ್ಧಿ ಪಥದಲ್ಲಿ ಗುರುತಿಸಿಕೊಳ್ಳಲು ಇಲ್ಲಿನ ರೈತರೇ ಕಾರಣ. 1960ರಲ್ಲಿ ಜನರ ಒಪ್ಪೊತ್ತಿನ ಊಟಕ್ಕೂ ಬವಣೆಯನ್ನು ಎದುರಿಸುತ್ತಿದ್ದ ದೇಶದಲ್ಲಿ 1980ರ ಹಸಿರು ಕ್ರಾಂತಿಯು ಭಾರತದ ಜನಸಾಮಾನ್ಯರಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ತಂದುಕೊಟ್ಟಿತು. ಪ್ರಸ್ತುತ ಹೊರ ದೇಶಗಳಿಗೆ ರಫ್ತು ಮಾಡುವಷ್ಟು ಆಹಾರಧಾನ್ಯ ಉತ್ಪಾದನೆ ಮಾಡುವ ಮೂಲಕ ನಮ್ಮ ದೇಶ ಶಕ್ತಿಯುತವಾಗಿದೆ. ರೈತರ ಶ್ರಮದಿಂದಲೇ ಈ ಕಾರ್ಯಸಾಧುವಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚಿನ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆಯುವ ಮೂಲಕ ರಾಜ್ಯವು ಶ್ವೇತ ಕ್ರಾಂತಿಗೂ ಮುನ್ನುಡಿ ಹಾಡಿದೆ. ಹಸಿರು ಕ್ರಾಂತಿ, ಶ್ವೇತಕ್ರಾಂತಿಯೊAದಿಗೆ ಶಿಕ್ಷಣ ಕ್ರಾಂತಿಯೂ ಸಹ ದೇಶದ ಅಭಿವೃದ್ಧಿಗೆ ಬುನಾದಿಯಾಗಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಕೇವಲ ಶೇ.12ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ ಶೇ.80ಕ್ಕೆ ತಲುಪಿದೆ. ಶಿಕ್ಷಣ ಕ್ರಾಂತಿಯಿಂದ ವಿಶ್ವದಲ್ಲಿ ಅತಿ ಹೆಚ್ಚು ತಾಂತ್ರಿಕ ಮಾನವ ಸಂಪನ್ಮೂಲ ಶಕ್ತಿ ಉತ್ಪಾದನೆಯಾಗುತ್ತಿರುವ ಹೆಗ್ಗಳಿಕೆಗೆ ನಮ್ಮ ದೇಶ ಪಾತ್ರವಾಗಿದೆ ಎಂದು ತಿಳಿಸಿದರಲ್ಲದೆ, ಕ್ರಾಂತಿಕಾರಕ ಬದಲಾವಣೆಗಳಿಂದ ದೇಶವು ವಿಶ್ವದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಶಾಸಕ ಸುರೇಶಗೌಡ ಮಾತನಾಡಿ, ರೈತರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸಬೇಕು ಎಂದು ತಿಳಿಸಿದರಲ್ಲದೆ ಸಿರಿಧಾನ್ಯ ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಗಣೇಶ್ ಮಾತನಾಡಿ, ಸರ್ಕಾರವು ಸಿರಿಧಾನ್ಯ ಬೆಳೆಯನ್ನು ಬೆಳೆಯಲು ಉತ್ತೇಜನ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಿರಿಧಾನ್ಯದ ಮಹತ್ವದ ಬಗ್ಗೆ ರೈತರು ಹಾಗೂ ಜನಸಾಮಾನ್ಯರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಎನ್.ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾಗರಿಕರಿಗೆ ಸಿರಿಧಾನ್ಯಗಳ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಸಿರಿಧಾನ್ಯ ಹಬ್ಬವನ್ನು ಆಯೋಜಿಸಲಾಗಿದೆ. ಕಡಿಮೆ ಮಳೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನೀಡುವ ಸಿರಿಧಾನ್ಯಗಳನ್ನು ಬೆಳೆಯಲು ಸುಧಾರಿತ ಬೇಸಾಯ ಕ್ರಮಗಳ ಅವಶ್ಯಕತೆ ಇರುವುದಿಲ್ಲ. ಸಿರಿಧಾನ್ಯ ಬೆಳೆ ಬೆಳೆಯಲು ಉತ್ತೇಜಿಸುವ ಸಲುವಾಗಿ ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್ ಗೆ 10,000 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು. ರೈತ ಬಾಂಧವರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಇದಕ್ಕೂ ಮುನ್ನ ಏರ್ಪಡಿಸಿದ್ದ ಕೃಷಿ ಮೆರವಣಿಗೆಯಲ್ಲಿ ಸಚಿವ ಡಾ.ಜಿ.ಪರಮೇಶ್ವರ ಅವರು ಎತ್ತಿನ ಬಂಡಿಯಲ್ಲಿ ಬಂದಿಳಿದರು. ನಂತರ ಸಚಿವರು ಸಿರಿಧಾನ್ಯ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದರು.
ಆಯಾ ತಾಲೂಕಿನ ಪ್ರಮುಖ ಬೆಳೆಗಳ ಆಹಾರ ಧಾನ್ಯಗಳಿಂದ ತಯಾರಿಸಿದ ಜಿಲ್ಲೆಯ ಭೂಪಟ ಚಿತ್ತಾಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಸಿರಿಧಾನ ಉತ್ಪಾದಕರು, ಮಾರುಕಟ್ಟೆದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx