ಇ ಸಿಗರೇಟ್ ಮಾರಾಟಕ್ಕೆ ನಿಷೇಧವಿದ್ದರೂ ಮಣಿಪಾಲ ಭಾಗದಲ್ಲಿ ಮತ್ತೆ ಇ ಸಿಗರೇಟ್ ಹಾವಳಿ ಕಂಡು ಬರುತ್ತಿದೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್ ಉನೈಶ್(25)ಹಾಗೂ ಸಾವಿರಾರು ರೂ.ಮೌಲ್ಯದ ಇ ಸಿಗರೇಟ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿಷೇಧಿತ ಇ ಸಿಗರೇಟ್ ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂಬಯಿಯಿಂದ ವಸ್ತುಗಳನ್ನು ಖರೀದಿಸುತ್ತಿದ್ದರು. ಕೂಲ್ ಡ್ರಿಂಕ್ಸ್, ಪಫ್ಯೂರ್ಮ್, ಲೈಟರ್ ಗಳಂತಹ ವಸ್ತುಗಳನ್ನು ಮುಂಬಯಿಯಿಂದ ಬಸ್ ಹಾಗೂ ರೈಲು ಮಾರ್ಗದ ಮೂಲಕ ಸುಲಭದಲ್ಲಿ ಉಡುಪಿ ಜಿಲ್ಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿರುವ ಅಂಶವೂ ಬೆಳಕಿಗೆ ಬಂದಿದೆ.
ಮಣಿಪಾಲದ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಕೋವಿಡ್ ಅವಧಿಯಲ್ಲಿ ಇ ಸಿಗರೇಟ್ ಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿತ್ತು. ಮಣಿಪಾಲ ಪೊಲೀಸರು ನಿರಂತರ ದಾಳಿ ನಡೆಸಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದರು. ಬಳಿ ಇದರ ಮಾರಾಟ ಅಂಗಡಿಗಳಲ್ಲಿ ಇರಲಿಲ್ಲ. ಪ್ರಸ್ತುತ ಮತ್ತೆ ಇ ಸಿಗರೇಟ್ ಮಾರಾಟ ಜಾಲ ಪತ್ತೆಯಾಗಿದ್ದು, ಪೊಲೀಸರು ಮತ್ತೆ ಈ ಬಗ್ಗೆ ಕಾರ್ಯಪ್ರವೃತ್ತರಾದರೆ ಈ ಜಾಲವನ್ನು ಪತ್ತೆಹಚ್ಚಲು ಸಾಧ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.
ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಸಿಗರೇಟ್ ಗೂ ಇ ಸಿಗರೇಟ್ ಗೂ ತಂಬಾಕು ಗುಣಮಟ್ಟದ ವ್ಯತ್ಯಾಸ ಅಷ್ಟೊಂದು ಇಲ್ಲ ಎಂಬ ಕಾರಣಕ್ಕೆ ಬೇಡಿಕೆ ಕಡಿಮೆಯಿತ್ತು. ಈಗ ಬೇಡಿಕೆ ಹೆಚ್ಚಳವಾಗಿರುವುದು ನೋಡಿದರೆ ಇ ಸಿಗರೇಟ್ ನೊಳಗೆ ಮತ್ತೇರಿಸುವ ಮಾದಕ ವಸ್ತುಗಳನ್ನು ಸೇರಿಸಿ ಸೇವನೆ ಮಾಡುತ್ತಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯವನ್ನು ಕೇಂದ್ರೀಕರಿಸಿಕೊಂಡು ಇ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


