ತುಮಕೂರು: ಬೌದ್ಧ ಧರ್ಮ ವಿಜ್ಞಾನ ಮತ್ತು ವೈಚಾರಿಕತೆಗೆ ಮಹತ್ವ ನೀಡುವುದರೊಂದಿಗೆ ನೈತಿಕತೆಗೂ ಸಮಾನ ಮಹತ್ವ ನೀಡುತ್ತದೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಗೌತಮ ಬುದ್ಧ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಸೋಮವಾರ ಬುದ್ಧಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಧಮ್ಮ ಕುರಿತ ಬುದ್ಧನ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬುದ್ಧನ ಧರ್ಮ ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆಗೆ ಪ್ರಾಮುಖ್ಯತೆ ನೀಡುವುದಿಲ್ಲ; ಬದಲಾಗಿ “ನನಗೆ ತಿಳಿದಿಲ್ಲ” ಎನ್ನುತ್ತದೆ. ಇತರ ಮಹಾನ್ ವ್ಯಕ್ತಿಗಳ ಅಸ್ತಿತ್ವವನ್ನು ಗೌರವಿಸುತ್ತದೆ. ಪ್ರಜ್ಞೆಯೇ ಮುಖ್ಯವೆಂದು ಸಾರುವ ಬುದ್ಧ, ತನ್ನ ಹೇಳಿಕೆಗಳನ್ನು ಯಾರೂ ನಂಬಲೇಬೇಕಾಗಿಲ್ಲ, ಬದಲಾಗಿ ಪರಿಶೀಲಿಸಬಹುದೆಂದು ತಿಳಿಸುತ್ತಾನೆ ಎಂದು ವಿಶ್ಲೇಷಿಸಿದರು.
ಕಾಲ ಮತ್ತು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ ಯಾವುದನ್ನಾದರೂ ತಿರಸ್ಕರಿಸುವ ಸ್ವಾತಂತ್ರ‍್ಯವಿದೆ, ಆದರೆ ಆಲೋಚಿಸುವ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರಬೇಕು. ಬುದ್ಧ ಧರ್ಮದಲ್ಲಿ ನೈತಿಕತೆಗೆ ಹೆಚ್ಚಿನ ಸ್ಥಾನವಿದ್ದು, ತಪ್ಪು ಮಾಡಿದವರು ತಪ್ಪಿತಸ್ಥರು, ಸರಿ ಮಾಡಿದವರು ಸರಿ ಎನಿಸಿಕೊಳ್ಳುತ್ತಾರೆ ಎಂದರು.
ಸ್ತ್ರೀಯರನ್ನು ಕೇವಲ ಗೃಹಸೇವೆಯನ್ನಷ್ಟೇ ಮಾಡುವವರೆಂದು ಪರಿಗಣಿಸುವ ಧೋರಣೆಯನ್ನು ಬೌದ್ಧ ಧರ್ಮ ಖಂಡಿಸುತ್ತದೆ. ಹೆಣ್ಣು ಮತ್ತು ಗಂಡು ಸಮಾನರು ಎಂದು ಸಾರಿದ ಬುದ್ಧ, ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದನು. ಸಮಾನತೆ, ಶೂದ್ರರ ಪರ ಕಾಳಜಿ ಮತ್ತು ಮಾತೃತ್ವವನ್ನು ಬುದ್ಧ ಗೌರವಿಸಿದ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೌದ್ಧಚಿಂತಕ ಪದ್ಮಾಲಯ ನಾಗರಾಜ್, ಕೇವಲ ಪೂಜೆ ಮತ್ತು ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಬುದ್ಧನ ಬೋಧನೆಗಳನ್ನು ಒಂದು ಚಿಕಿತ್ಸೆಯಂತೆ ಅಳವಡಿಸಿಕೊಳ್ಳಬೇಕು. ಇದನ್ನು ಬೇರೆಯವರು ಮಾಡುವುದಿಲ್ಲ, ನಾವೇ ಸ್ವತಃ ಪ್ರಯತ್ನಿಸಬೇಕು. ಯಾವಾಗ ನಾವು ಈ ದಿಟ್ಟ ಹೆಜ್ಜೆ ಇಡುತ್ತೇವೆಯೋ ಆಗ ಬದಲಾವಣೆ ಸಾಧ್ಯ ಎಂದರು.
ಅವಕಾಶದ ಕೊರತೆ, ಅಸ್ಮಿತೆಯ ಸಮಸ್ಯೆ, ಸಂಬಂಧಗಳ ಸಂಘರ್ಷ ಮತ್ತು ನೈತಿಕತೆಯ ಗೊಂದಲವು ಮನಸ್ಸಿಗೆ ಅಶಾಂತಿಯನ್ನು ಉಂಟುಮಾಡುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಅಸ್ತಿತ್ವದ ಅಹಂಕಾರವೇ ಕಾರಣ. ಹಣ, ಅಧಿಕಾರ ಮತ್ತು ಖ್ಯಾತಿಯು ಕೇವಲ ಜೈವಿಕ ಅಸ್ತಿತ್ವವನ್ನು ಪೋಷಿಸುತ್ತವೆ, ಆದರೆ ಬುದ್ಧನ ಮಾರ್ಗವು ಅಸ್ತಿತ್ವದ ಅಹಂಕಾರವನ್ನು ನಿವಾರಿಸುತ್ತದೆ ಎಂದರು.
ಕರ್ಮ ಚಳುವಳಿ ಮತ್ತು ಸ್ತ್ರೀ ಚಳವಳಿಗಳು ಹೊರಗಿನ ಬದಲಾವಣೆಗೆ ಪ್ರಯತ್ನಿಸಿದರೂ, ನಿಜವಾದ ಬದಲಾವಣೆ ಒಳಗಿನಿಂದ ಬರಬೇಕು. ನಮ್ಮ ಮನಸ್ಸನ್ನು ಶೂನ್ಯವಾಗಿಸಿಕೊಂಡು ಸುತ್ತಲಿನ ಪ್ರಪಂಚ ಮತ್ತು ನಮ್ಮ ಅಂತರಂಗದಲ್ಲಿ ನಡೆಯುವ ಕ್ರಿಯೆಗಳನ್ನು ಗಮನಿಸುವುದೇ ಬುದ್ಧನ ಬೋಧನೆ. ಆಗ ಹುಟ್ಟುವ ಮನಸ್ಸಿಗೆ ಪ್ರಶ್ನೆಗಳಿರುತ್ತವೆ. ಜಾತಿಯ ಕಲ್ಪನೆಯಿರುವುದು ನಮ್ಮ ಮನಸ್ಸಿನಲ್ಲಿಯೇ, ದೇವರು ಸಹ ಅಷ್ಟೇ ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಜೀವನದಲ್ಲಿ ಯಶಸ್ಸು ದೊರೆಯದಿರಲು ಮುಖ್ಯ ಕಾರಣವೆಂದರೆ ತಮ್ಮನ್ನು ತಾವು ಅರಿಯದಿರುವುದು. ಅತಿಯಾದ ಚಿಂತೆ ಮತ್ತು ಇತರರ ಮಾತುಗಳನ್ನು ಕೇಳುವುದರಿಂದ ಆತ್ಮಹತ್ಯೆಯಂತಹ ದುರಂತಗಳು ಸಂಭವಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಮಾರ್ಗವನ್ನು ತಾವೇ ಕಂಡುಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ. ಶೇಟ್, ಗೌತಮ ಬುದ್ಧ ಅಧ್ಯಯನ ಪೀಠದ ಸಂಯೋಜಕ ಡಾ.ನಾಗಭೂಷಣ ಬಗ್ಗನಡು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————